ವಕ್ಫ್ ತಿದ್ದುಪಡಿ ಮಸೂದೆಯನ್ನು ಕಾಂಗ್ರೆಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ : ಜೈರಾಮ್ ರಮೇಶ್

Photo | PTI
ಹೊಸದಿಲ್ಲಿ : ವಕ್ಫ್ ತಿದ್ದುಪಡಿ ಮಸೂದೆಯ ಸಾಂವಿಧಾನಿಕತೆಯನ್ನು ಕಾಂಗ್ರೆಸ್ ಪಕ್ಷವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ಕಾಂಗ್ರೆಸ್ ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ತಿದ್ದುಪಡಿ ಮಸೂದೆ- 2024ರ ಸಾಂವಿಧಾನಿಕತೆಯನ್ನು ಪ್ರಶ್ನಿಸಲಿದೆ. ಭಾರತದ ಸಂವಿಧಾನದಲ್ಲಿ ಒಳಗೊಂಡಿರುವ ತತ್ವಗಳು, ನಿಬಂಧನೆಗಳು ಮತ್ತು ಆಚರಣೆಗಳ ಮೇಲೆ ಮೋದಿ ಸರಕಾರದ ಎಲ್ಲಾ ದಾಳಿಗಳನ್ನು ವಿರೋಧಿಸುವುದನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಲೋಕಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಅಂಗೀಕಾರಗೊಂಡಿದ್ದ ವಕ್ಫ್ ತಿದ್ದುಪಡಿ ಮಸೂದೆಯು, ಗುರುವಾರ ರಾಜ್ಯಸಭೆಯಲ್ಲೂ ಅಂಗೀಕಾರವಾಗಿದೆ. ರಾಜ್ಯಸಭೆಯಲ್ಲಿ ಚರ್ಚೆಯ ನಂತರ ಸ್ಪೀಕರ್ ಜಗದೀಪ್ ಧನಕರ್ ಮಸೂದೆಯನ್ನು ಮತಕ್ಕೆ ಹಾಕಿದರು. ಮಸೂದೆಯ ಪರ 128 ಮಂದಿ ಸಂಸದರು ಮತ ಚಲಾಯಿಸಿದರೆ, 95 ಮಂದಿ ಮಸೂದೆಯ ವಿರುದ್ಧ ಮತ ಚಲಾಯಿಸಿದರು.
ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆ ರಾಷ್ಟ್ರಪತಿಗಳ ಅಂಕಿತಕ್ಕಾಗಿ ರವಾನೆಯಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಮಸೂದೆಗೆ ಅಂಕಿತ ಹಾಕಿದ ಬಳಿಕ ಈ ಕುರಿತು ಅಧಿಕೃತ ಸರಕಾರಿ ಅಧಿಸೂಚನೆ ಪ್ರಕಟವಾಗಲಿದೆ.