ತಮ್ಮ ಆದಾಯವನ್ನು ಬಚ್ಚಿಟ್ಟು ಕಡಿಮೆ ಆದಾಯ ತೆರಿಗೆಯನ್ನು ಪಾವತಿಸುತ್ತಿರುವ ಶ್ರೀಮಂತರು; RBI ಆರ್ಥಿಕ ತಜ್ಞರ ಸಂಶೋಧನೆಯಿಂದ ಬಹಿರಂಗ

Update: 2025-04-14 17:59 IST
ತಮ್ಮ ಆದಾಯವನ್ನು ಬಚ್ಚಿಟ್ಟು ಕಡಿಮೆ ಆದಾಯ ತೆರಿಗೆಯನ್ನು ಪಾವತಿಸುತ್ತಿರುವ ಶ್ರೀಮಂತರು; RBI ಆರ್ಥಿಕ ತಜ್ಞರ ಸಂಶೋಧನೆಯಿಂದ ಬಹಿರಂಗ

Photo | PTI

  • whatsapp icon

ಹೊಸದಿಲ್ಲಿ: ಭಾರತದಲ್ಲಿ ಶ್ರೀಮಂತ ಕುಟುಂಬಗಳು ತಮ್ಮ ಸಂಪತ್ತಿಗೆ ಹೋಲಿಸಿದರೆ ಕಡಿಮೆ ಆದಾಯವನ್ನು ತೋರಿಸುತ್ತಿವೆ, ತನ್ಮೂಲಕ ತೆರಿಗೆಯನ್ನು ವಂಚಿಸುತ್ತಿವೆ ಎನ್ನುವುದನ್ನು RBIನ ಹಣಕಾಸು ನೀತಿ ಸಮಿತಿಯ ಸದಸ್ಯ ಹಾಗೂ ದಿಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್ ನ ನಿರ್ದೇಶಕ ರಾಮ ಸಿಂಗ್ ಅವರ ಸಂಶೋಧನೆಯು ಬಹಿರಂಗಗೊಳಿಸಿದೆ ಎಂದು Economic Times ವರದಿ ಮಾಡಿದೆ.

ಕುಟುಂಬ ಸಂಪತ್ತಿನಲ್ಲಿ ಶೇ.1ರಷ್ಟು ಏರಿಕೆಯು ವರದಿಯಾದ ಆದಾಯ-ಸಂಪತ್ತು ಅನುಪಾತ(ವ್ಯಕ್ತಿಯ ಆದಾಯಕ್ಕೆ ಹೋಲಿಸಿದರೆ ಆತನ ಸಂಪತ್ತಿನ ಪ್ರಮಾಣ)ದಲ್ಲಿ ಸರಾಸರಿ ಶೇ.0.6ಕ್ಕೂ ಅಧಿಕ ಇಳಿಕೆಗೆ ಸಮನಾಗಿದೆ. ಉನ್ನತ ಶ್ರೀಮಂತರು ವರದಿ ಮಾಡಿರುವ ಆದಾಯ-ಸಂಪತ್ತು ಅನುಪಾತಗಳು ಅವರ ಆಸ್ತಿಗಳ ಮೇಲಿನ ಆದಾಯ ದರಕ್ಕೆ ಹೋಲಿಸಿದರೆ ಕಡಿಮೆ ಎಂದು ಸಂಶೋಧನಾ ವರದಿಯು ಹೇಳಿದೆ.

ಸಂಶೋಧನೆಗಾಗಿ ವಿಶ್ಲೇಷಣೆಯು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಸಲ್ಲಿಸಿದ್ದ ಅಫಿಡವಿಟ್ ಗಳು, ಫೋರ್ಬ್ಸ್ ಲಿಸ್ಟ್ ಮತ್ತು ಆದಾಯ ತೆರಿಗೆ ದತ್ತಾಂಶಗಳನ್ನು ಆಧರಿಸಿದೆ.

ಅತಿ ಶ್ರೀಮಂತರಲ್ಲಿ ಕಂಡು ಬಂದಿರುವ ಕಡಿಮೆ ಆದಾಯ-ಸಂಪತ್ತು ಅನುಪಾತಗಳಲ್ಲಿ ತೆರಿಗೆ ವಂಚನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ ಎನ್ನುವುದು ಸಂಶೋಧನೆಯಲ್ಲಿ ಕಂಡು ಬಂದಿದೆ.

ವರದಿಯು ವೃತ್ತಿ ಮತ್ತು ಲಿಂಗ ಪ್ರಭಾವವನ್ನೂ ಎತ್ತಿ ತೋರಿಸಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಕಡಿಮೆ ಆದಾಯವನ್ನು ತೋರಿಸುವುದು ಹೆಚ್ಚು. ಪೂರ್ಣಕಾಲಿಕ ಕೃಷಿಕರು ಮತ್ತು ರಾಜಕಾರಣಿಗಳೂ ತುಲನಾತ್ಮಕವಾಗಿ ಕಡಿಮೆ ಆದಾಯಗಳನ್ನು ತೋರಿಸುತ್ತಾರೆ.

ಶೇ.10ರಷ್ಟು ತಳಮಟ್ಟದ ಕುಟುಂಬಗಳು ಹೆಚ್ಚುಕಡಿಮೆ ತಮ್ಮ ಸಂಪತ್ತಿನ ಎರಡು ಪಟ್ಟು ಆದಾಯವನ್ನು ವರದಿ ಮಾಡಿವೆ. ಶೇ.1ರಷ್ಟು ಅಗ್ರ ಕುಟುಂಬಗಳು ತಮ್ಮ ಸಂಪತ್ತಿನ ಕೇವಲ ಶೇ.3ರಿಂದ ಶೇ.4ರಷ್ಟು ಆದಾಯವನ್ನು ವರದಿ ಮಾಡಿದ್ದರೆ, ಶೇ.0.1ರಷ್ಟು ಅತ್ಯಂತ ಶ್ರೀಮಂತರು ತೋರಿಸಿರುವ ಆದಾಯವು ಅವರ ಸಂಪತ್ತಿನ ಶೇ.2ಕ್ಕೂ ಕಡಿಮೆಯಿದೆ ಎಂದು ಸಂಶೋಧನಾ ವರದಿಯು ತಿಳಿಸಿದೆ.

ಅತ್ಯಂತ ಶ್ರೀಮಂತ 10 ಕುಟುಂಬಗಳು ತೋರಿಸಿರುವ ಆದಾಯವು ಅವರ ಸಂಪತ್ತಿನ ಕೇವಲ ಶೇ.0.5ರಷ್ಟಿದೆ.

ಸಂಶೋಧನೆಯ ಪ್ರಕಾರ ವೈಯಕ್ತಿಕ ಸಂಪತ್ತು ಮತ್ತು ವರದಿಯಾಗಿರುವ ಆದಾಯದ ನಡುವೆ ಇದೇ ಮಾದರಿಯು ಕಂಡು ಬಂದಿದೆ.

ಶೇ.20ರಷ್ಟು ಅತ್ಯಂತ ಶ್ರೀಮಂತರ ಆದಾಯ-ಸಂಪತ್ತು ಅನುಪಾತವು ರಾಷ್ಟ್ರೀಯ ಸರಾಸರಿಯ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಿದೆ ಎನ್ನುವುದನ್ನು ರಾಷ್ಟ್ರೀಯ ಆದಾಯ ದತ್ತಾಂಶಗಳನ್ನು ಬಳಸಿಕೊಂಡು ಸಂಶೋಧನೆಯು ಕಂಡು ಹಿಡಿದಿದೆ.

ತೆರಿಗೆದಾರನು ಶ್ರೀಮಂತನಾದಷ್ಟೂ ಸಂಪತ್ತಿಗೆ ಹೋಲಿಸಿದರೆ ಪಾವತಿಸುವ ಆದಾಯ ತೆರಿಗೆಯ ಪಾಲು ಸಣ್ಣದಾಗಿರುತ್ತದೆ ಎಂದು ವರದಿಯು ಬೆಟ್ಟು ಮಾಡಿದೆ.

ಶ್ರೀಮಂತರಿಗೆ ಅವರ ಆದಾಯ ತೆರಿಗೆ ಹೊಣೆಗಾರಿಕೆಯು ಅವರ ಸಂಪತ್ತಿನ ಸುಮಾರು ಶೇ.1ರಷ್ಟಿದ್ದರೆ, ಶೇ.0.1ರಷ್ಟು ಶ್ರೀಮಂತರಿಗೆ ಇದು ಸಂಪತ್ತಿನ ಶೇ.0.7ರಷ್ಟಿದೆ. ಅಲ್ಲದೆ ಶೇ.5ರಷ್ಟು ಶ್ರೀಮಂತ ವ್ಯಕ್ತಿಗಳು ತಮ್ಮ ಬಂಡವಾಳ ಆದಾಯದ ಐದನೇ ಒಂದು ಭಾಗಕ್ಕಿಂತ ಕಡಿಮೆ ತೆರಿಗೆಯನ್ನು ಪಾವತಿಸುತ್ತಾರೆ ಮತ್ತು ಅಗ್ರ ಶೇ.0.1ರಷ್ಟು ಶ್ರೀಮಂತರು ಕೇವಲ ಹತ್ತನೇ ಒಂದು ಭಾಗ ತೆರಿಗೆಯನ್ನು ಪಾವತಿಸುತ್ತಾರೆ.

ಆದರೂ ತೆರಿಗೆ ವಂಚನೆಯು ಧನಾತ್ಮಕ ಫಲಿತಾಂಶಗಳನ್ನು ಹೊಂದಿರಬಹುದು, ಏಕೆಂದರೆ ಅದು ಶ್ರೀಮಂತರಿಂದ ಹೆಚ್ಚಿನ ಹೂಡಿಕೆಗೆ ಕಾರಣವಾಗಬಹುದು ಮತ್ತು ಇದು ಉದ್ಯೋಗ ಹಾಗೂ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಬಹುದು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News