ಹೈದರಾಬಾದ್ | ಪೊಲೀಸರ ರಸ್ತೆಬದಿ ತಪಾಸಣೆಯನ್ನು ತಪ್ಪಿಸುವ ಭರದಲ್ಲಿ ಬೈಕ್ ಸವಾರ ಮೃತ್ಯು: ಕುಟುಂಬದ ಸದಸ್ಯರಿಂದ ಪ್ರತಿಭಟನೆ
Photo : munsifdaily
ಹೈದರಾಬಾದ್: ಪೊಲೀಸರ ರಸ್ತೆಬದಿ ತಪಾಸಣೆಯನ್ನು ತಪ್ಪಿಸಿಕೊಂಡು ಪರಾರಿಯಾಗುವ ಪ್ರಯತ್ನದಲ್ಲಿ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಜಾರಿ ಬಿದ್ದಿದ್ದರಿಂದ 35 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ರವಿವಾರ ಹೈದರಾಬಾದ್‌ನ ಬಾಲನಗರ್‌ನಲ್ಲಿ ನಡೆದಿದೆ. ಇದರ ಬೆನ್ನಿಗೇ, ಈ ಸಾವಿಗೆ ಸಂಚಾರಿ ಪೊಲೀಸ್ ಪೇದೆಯೊಬ್ಬರು ಕಾರಣ ಎಂದು ಆರೋಪಿಸಿ, ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಇದರ ಬೆನ್ನಿಗೆ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.
ಮೃತ ವ್ಯಕ್ತಿಯನ್ನು ಜೋಶಿ ಬಾಬು ಎಂದು ಗುರುತಿಸಲಾಗಿದ್ದು, ರವಿವಾರ ದೈನಂದಿನ ತಪಾಸಣೆಗಾಗಿ ಆತನ ಮೋಟಾರ್ ಬೈಕ್ ಅನ್ನು ಸಂಚಾರಿ ಪೊಲೀಸರು ತಡೆದಿದ್ದಾರೆ. ಪೊಲೀಸರ ಪ್ರಕಾರ, ಪಂಜುಗುಟ್ಟಗೆ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದ ಮೃತ ಜೋಶಿ ಬಾಬು ಅನ್ನು ಬಾಲನಗರ್ ಸಂಚಾರಿ ಪೊಲೀಸರು ಐಡಿಪಿಎಲ್ ಟೌನ್‌ಶಿಪ್ ಮುಖ್ಯ ದ್ವಾರದ ಬಳಿ ತಡೆದರು ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಯೊಬ್ಬರು, "ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಜೋಶಿ ಬಾಬು, ತನ್ನ ಬೈಕ್ ಜಾರಿದ್ದರಿಂದಾಗಿ, ಆಕಸ್ಮಿಕವಾಗಿ ರಸ್ತೆಯ ಮೇಲೆ ಬಿದ್ದ. ಇದೇ ವೇಳೆ, ರಸ್ತೆಯಲ್ಲಿ ಬರುತ್ತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ತೆಯ ಬಸ್ ಒಂದರ ಹಿಂಬದಿ ಚಕ್ರದಡಿ ಸಿಲುಕಿಕೊಂಡಿದ್ದರಿಂದ, ಆತ ಸ್ಥಳದಲ್ಲೇ ಮೃತಪಟ್ಟ" ಎಂದು ತಿಳಿಸಿದ್ದಾರೆ.
ಈ ಸಂಬಂಧ ಮೃತ ವ್ಯಕ್ತಿಯ ಸಹೋದರ ನೀಡಿರುವ ದೂರನ್ನು ಆಧರಿಸಿ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106ರ ಅಡಿ ಆರೋಪಿ ಪೊಲೀಸ್ ಪೇದೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.