ತಂದೆಯ ಸ್ನೇಹಿತ ಎಂದು ಕರೆ ಮಾಡಿದ ಸೈಬರ್‌ ವಂಚಕನಿಗೆ ಚಳ್ಳೆಹಣ್ಣು ತಿನ್ನಿಸಿದ ಯುವತಿ!: ವಿಡಿಯೋ ವೈರಲ್

Update: 2025-04-14 18:06 IST
ತಂದೆಯ ಸ್ನೇಹಿತ ಎಂದು ಕರೆ ಮಾಡಿದ ಸೈಬರ್‌ ವಂಚಕನಿಗೆ ಚಳ್ಳೆಹಣ್ಣು ತಿನ್ನಿಸಿದ ಯುವತಿ!: ವಿಡಿಯೋ ವೈರಲ್

Photo : X

  • whatsapp icon

ಹೊಸದಿಲ್ಲಿ: ಹೊಸ ಹೊಸ ತಂತ್ರಗಳೊಂದಿಗೆ ಜನರನ್ನು ಸೈಬರ್‌ ವಂಚಕರು ಮೋಸ ಮಾಡುತ್ತಲೇ ಬಂದಿದ್ದಾರೆ. ಇದೀಗ ಮತ್ತೊಂದು ತಂತ್ರದೊಂದಿಗೆ ಸೈಬರ್‌ ವಂಚಕರು ಜನರನ್ನು ಯಾಮಾರಿಸುತ್ತಿದ್ದು, ಪರಿಚಯಸ್ಥರಂತೆ ತಮ್ಮನ್ನು ಬಿಂಬಿಸಿ ಸೂಕ್ಷ್ಮ ಮಾಹಿತಿಗಳನ್ನು ಪಡೆದು, ವಂಚಿಸುತ್ತಿದ್ದಾರೆ.

ಇದೀಗ ಅಂತಹದೇ ಪ್ರಕರಣವೊಂದರಲ್ಲಿ ವಂಚಕನಿಗೆ ಯುವತಿಯೊಬ್ಬಳು ಚಳ್ಳೆಹಣ್ಣು ತಿನ್ನಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ಯುವತಿಗೆ ಕರೆ ಮಾಡಿ ʼತಂದೆಯ ಸ್ನೇಹಿತʼ ಎಂದು ಪರಿಚಯಿಸಿಕೊಂಡ ಅಪರಿಚಿತನೊಬ್ಬ, ಆಕೆಯ ತಂದೆಯ ಕೋರಿಕೆಯ ಮೇರೆಗೆ ತಾನು ಯುಪಿಐ ಖಾತೆಗೆ ಹಣ ಹಾಕುತ್ತಿದ್ದೇನೆ ಎಂದು ನಂಬಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ವಂಚಕನು ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ಅವಳಿಗೆ 12,000 ರೂ.ಗಳನ್ನು ಕಳುಹಿಸುವುದಾಗಿ ಹೇಳುತ್ತಾನೆ. ಈಗಾಗಲೇ ಹತ್ತು ಸಾವಿರ ರೂ.ಗಳನ್ನು ಕಳುಹಿಸಿದ್ದೇನೆ ಎಂದು ವಂಚಕ ಹೇಳಿಕೊಂಡಿದ್ದು, ಅದಕ್ಕೆ ಪೂರಕವಾಗಿ ನಕಲಿ SMS ಅನ್ನು ಕೂಡಾ ಆಕೆಯ ಫೋನ್‌ ಗೆ ಫಾರ್ವರ್ಡ್ ಮಾಡಿದ್ದನು.

ನಂತರ 2000 ರೂ.ಗಳನ್ನು ಹಾಕುವ ಬದಲಾಗಿ 20000 ಸಾವಿರ ರೂ. ಹಾಕಿದ್ದೇನೆ, 18 ಸಾವಿರ ರೂ.ಗಳನ್ನು ಮರಳಿ ಕಳುಹಿಸುವಂತೆ ಆತ ಯುವತಿ ಬಳಿ ಹೇಳಿದ್ದಾನೆ.

ಆದರೆ, ಈ ಎಸ್‌ಎಮ್‌ಎಸ್‌ ಬ್ಯಾಂಕ್‌ ನಿಂದ ಬಂದದ್ದಲ್ಲ, ಬದಲಾಗಿ ವೈಯಕ್ತಿಕ ಸಂಖ್ಯೆಯಿಂದ ಬಂದಿದೆ ಎಂಬುದನ್ನು ಗಮನಿಸಿದ ಯುವತಿ, ವಂಚಕನ ತಂತ್ರಗಳನ್ನು ಅರ್ಥ ಮಾಡಿಕೊಂಡು, ಆತನಿಗೆ 18,000 ರೂ.ಗಳನ್ನು ವಾಪಸ್ ಕಳುಹಿಸಿದ್ದೇನೆ ಎಂದು ತೋರಿಸುವ ನಕಲಿ ಎಸ್‌ಎಂಎಸ್ ಸಂದೇಶವನ್ನು ಆತನಿಗೆ ರವಾನಿಸುತ್ತಾಳೆ.

ಅಷ್ಟೊತ್ತಿಗೆ, ತನ್ನ ಬಂಡವಾಳ ಬಾಲಕಿಗೆ ಈಗಾಗಲೇ ತಿಳಿದಿದೆ ಎಂದು ಮನಗಂಡ ವಂಚಕ ಸೋಲೊಪ್ಪಿಕೊಂಡಿದ್ದಾನೆ. ಸದ್ಯ, ವಂಚಕನ ತಂತ್ರಕ್ಕೆ ಪ್ರತಿತಂತ್ರ ಹೂಡಿದ ಯುವತಿಯ ವಿಡಿಯೋ ಜನರ ಗಮನ ಸೆಳೆದಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News