ಮಧ್ಯಪ್ರದೇಶ |ಈದ್-ಉಲ್-ಫಿತ್ರ್ ಪ್ರಾರ್ಥನೆಯ ವೇಳೆ ತೋಳಿಗೆ ಕಪ್ಪು ಪಟ್ಟಿ ಧರಿಸಿ, ಫೆಲೆಸ್ತೀನ್ ಪರ ಬಿತ್ತಿ ಚಿತ್ರಗಳನ್ನು ಪ್ರದರ್ಶಿಸಿದ ಮುಸ್ಲಿಮರು

Photo Credit | newindianexpress
ಭೋಪಾಲ್: ಸೋಮವಾರ ಬಿಜೆಪಿ ಆಡಳಿತಾರೂಢ ರಾಜ್ಯವಾದ ಮಧ್ಯಪ್ರದೇಶದಲ್ಲಿ ಹಲವಾರು ಮುಸ್ಲಿಮರು ಈದ್ಗಾ ಮೈದಾನಕ್ಕೆ ಈದ್-ಉಲ್-ಫಿತ್ರ್ ಪ್ರಾರ್ಥನೆಗೆಂದು ತೆರಳುವುದಕ್ಕೂ ಮುನ್ನ, ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಲು ತೋಳಿಗೆ ಕಪ್ಪು ಪಟ್ಟಿ ಧರಿಸಿದ್ದರಲ್ಲದೆ, ಫೆಲೆಸ್ತೀನ್ ಪರವಾದ ಭಿತ್ತಿಚಿತ್ರಗಳನ್ನೂ ಪ್ರದರ್ಶಿಸಿದರು ಎಂದು newindianexpress.com ವರದಿ ಮಾಡಿದೆ.
ಯುವಕರು ಪ್ರಾರ್ಥನೆಗೆಂದು ಈದ್ಗಾ ಮೈದಾನಕ್ಕೆ ತೆರಳುವಾಗ, ಗಾಝಾ ಮೇಲಿನ ಇಸ್ರೇಲ್ ನ ಅಮಾನುಷ ದಾಳಿಯನ್ನು ಪ್ರತಿಭಟಿಸಿ, ‘ನಾನು ಫೆಲೆಸ್ತೀನ್ ನೊಂದಿಗಿದ್ದೇನೆ’, ‘ಅಲ್-ಅಕ್ಸಾವನ್ನು ರಕ್ಷಿಸಿ’, ‘ಫೆಲೆಸ್ತೀನ್ ಅನ್ನು ರಕ್ಷಿಸಿ’ ಹಾಗೂ ‘ಅಲ್-ಅಕ್ಸಾ ನಮ್ಮ ಹೆಮ್ಮೆ’ ಎಂಬ ಭಿತ್ತಿಚಿತ್ರಗಳನ್ನು ಹಿಡಿದುಕೊಂಡಿರುವುದು ಕಂಡು ಬಂದಿತು.
ಮಧ್ಯಪ್ರದೇಶ ರಾಜಧಾನಿ ಭೋಪಾಲ್ ನಿಂದ ಸುಮಾರು 390 ಕಿಮೀ ದೂರವಿರುವ ಈಸಾನ್ಯ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಮುಖ್ಯ ಗೋಪುರದ ಬಳಿ ಈದ್-ಉಲ್-ಫಿತ್ರ್ ಪ್ರಾರ್ಥನೆ ಸಲ್ಲಿಸಿದ ನಂತರ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ಯುವಕರು ಇಸ್ರೇಲ್ ವಿರೋಧಿ ಘೋಷಣೆಗಳನ್ನು ಕೂಗಿದರು ಹಾಗೂ ಇಸ್ರೇಲ್ ವಿರೋಧಿ ಮತ್ತು ವಕ್ಫ್ ತಿದ್ದುಪಡಿ ಮಸೂದೆ ವಿರೋಧಿ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು.
ಈ ವೇಳೆ, “ಗಾಝಾದ ರಸ್ತೆಗಳು ನಿಶ್ಯಬ್ದವಾಗಿವೆ, ನೆತನ್ಯಾಹು ಕೊಲೆಗಡುಕನಾಗಿದ್ದಾನೆ” “ಇಸ್ರೇಲ್-ನೆತನ್ಯಾಹುಗೆ ಧಿಕ್ಕಾರ” ಹಾಗೂ “ಡೊನಾಲ್ಡ್ ಟ್ರಂಪ್ ಗೆ ಧಿಕ್ಕಾರ” ಎಂಬ ಘೋಷಣೆಗಳನ್ನು ಯುವಕರು ಕೂಗಿದರು.
ಪ್ರತಿಭಟನೆಯ ವೇಳೆ ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಮಸೂದೆಯನ್ನು ಪ್ರತಿಭಟಿಸಿ ತಮ್ಮ ತೋಳಿಗೆ ಕಪ್ಪು ಪಟ್ಟಿ ಧರಿಸಿದ್ದರು “ವಕ್ಫ್ ಅನ್ನು ತಿರುಚುವುದೆಂದರೆ, ಸಂವಿಧಾನವನ್ನು ತಿರುಚುವುದು ಎಂದರ್ಥ” ಎಂಬ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿದರು.