ಮಹಾರಾಷ್ಟ್ರ | ಸಹೋದ್ಯೋಗಿಯ ಹತ್ಯೆ: ಇನ್‍ಸ್ಪೆಕ್ಟರ್‌ ಗೆ ಜೈಲು ಶಿಕ್ಷೆ

Update: 2025-04-06 09:09 IST
ಮಹಾರಾಷ್ಟ್ರ | ಸಹೋದ್ಯೋಗಿಯ ಹತ್ಯೆ: ಇನ್‍ಸ್ಪೆಕ್ಟರ್‌ ಗೆ ಜೈಲು ಶಿಕ್ಷೆ

PC | timesofindia

  • whatsapp icon

ನವಿಮುಂಬೈ : ಸಹಾಯಕ ಪೊಲೀಸ್ ಇನ್‍ಸ್ಪೆಕ್ಟರ್ ಅಶ್ವಿನಿ ಬಿದ್ರೆ-ಗೋರೆ ನಾಪತ್ತೆಯಾದ ಒಂಬತ್ತು ವರ್ಷಗಳ ಬಳಿಕ ಅವರ ಸಹೋದ್ಯೋಗಿ ಇನ್‍ಸ್ಪೆಕ್ಟರ್ ಅಭಯ್ ಕುರುಂಡ್ಕರ್ ಎಂಬಾತನನ್ನು ಪನ್ವೇಲ್ ಸೆಷನ್ಸ್ ನ್ಯಾಯಾಲಯ ಹತ್ಯೆ ಆರೋಪದಲ್ಲಿ ದೋಷಿ ಎಂದು ಘೋಷಿಸಿದೆ. ಎ.11ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದೆ. ಹತ್ಯೆಗೊಳಗಾದ ಮಹಿಳಾ ಅಧಿಕಾರಿಯ ಮೃತದೇಹವನ್ನು ವಿಲೇವಾರಿ ಮಾಡಲು ಸಹಕರಿಸಿದ ಮತ್ತು ಪುರಾವೆಗಳನ್ನು ಮರೆಮಾಚಲು ಸಹಕರಿಸಿದ ಆರೋಪದಲ್ಲಿ ಇತರ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿದೆ.

ಎಪಿಐ ಬಿದ್ರೆ ಜತೆ ಪ್ರೇಮಸಂಬಂಧ ಹೊಂದಿದ್ದ ಕುರುಂಡ್ಕರ್, ವ್ಯಾಜ್ಯವೊಂದರ ಸಂಬಂಧ 2016ರ ಏಪ್ರಿಲ್‍ನಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ. ಮೃತದೇಹ ಪತ್ತೆಯಾಗಿರಲೇ ಇಲ್ಲ. ಬಿದ್ರೆಯ ತಂದೆ ಹಾಗೂ ಮಗಳಿಗೆ ನೀಡಬೇಕಾದ ಪರಿಹಾರದ ಬಗ್ಗೆ ವಿಚಾರಣೆ ನಡೆಸಿ ನ್ಯಾಯಾಧೀಶರು ಏಪ್ರಿಲ್ 11ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದ್ದಾರೆ. ಘಟನೆ ಬಳಿಕ 2017ರಲ್ಲಿ ಕುರುಂಡ್ಕರ್ ಗೆ ರಾಷ್ಟ್ರಪತಿ ಶೌರ್ಯ ಪದಕ ನೀಡಿ ಗೌರವಿಸಿದ ಬಗ್ಗೆ ನ್ಯಾಯಾಧೀಶರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

"ಅಶ್ವಿನಿ ಬಿದ್ರೆ-ಗೋರ್ ಅವರನ್ನು 2016ರ ಏಪ್ರಿಲ್‍ನಲ್ಲಿ ಅಪಹರಿಸಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದ ಅಭಯ್ ಕುರುಂಡ್ಕರ್ ಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರಪತಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ಅಚ್ಚರಿಯ ವಿಷಯ. ಕೊಲೆ ಆರೋಪ ಎದುರಿಸುತ್ತಿದ್ದ ಅಧಿಕಾರಿಯನ್ನು ಹೇಗೆ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಯಿತು ಎಂಬ ಬಗ್ಗೆ ಪ್ರಶ್ನೆ ಉದ್ಭವಿಸುತ್ತದೆ. ಶಿಫಾರಸ್ಸು ಮಾಡಿದ ಅಧಿಕಾರಿ ವಿರುದ್ಧವೂ ತನಿಖೆ ಅಗತ್ಯ" ಎಂದು ನ್ಯಾಯಾಧೀಶರು ಹೇಳಿದ್ದಾರೆ.

ನ್ಯಾಯಾಧೀಶರು ತೀರ್ಪು ಪ್ರಕಟಿಸಿದಾಗ ಕುರುಂಡ್ಕರ್ ಮುಖದಲ್ಲಿ ಸ್ವಲ್ಪವೂ ಪಶ್ಚಾತ್ತಾಪದ ಸುಳಿವು ಕಾಣಿಸಲಿಲ್ಲ ಎಂದು ಬಿದ್ರೆಯ ಪರಿತ್ಯಕ್ತ ಪತಿ ರಾಜು ಗೋರೆ ಹೇಳಿದ್ದಾರೆ. ಕುರುಂಡ್ಕರ್ ಚಾಲಕ ಕುಂದನ್ ಭಂಡಾರಿ ಮತ್ತು ಪುಣೆಯ ಬ್ಯಾಂಕ್ ಸಿಬ್ಬಂದಿ ಮಹೇಶ್ ಫಳ್ನೀಕರ್ ಶಿಕ್ಷೆಗೆ ಒಳಗಾದ ಇತರ ಇಬ್ಬರು ಆರೋಪಿಗಳು. ದೋಷಿ ಎಂದು ಘೋಷಿಸುತ್ತಿದ್ದಂತೆ ಫಳ್ಕೀಕರ್ ಕೋರ್ಟ್‍ನಲ್ಲಿ ಕುಸಿದು ಬಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News