ಭಾರತದಲ್ಲಿ ಅಲ್ಪಸಂಖ್ಯಾತರು, ತುಳಿತಕ್ಕೊಳಗಾದ ವರ್ಗಗಳ ವಿರುದ್ಧ ಹೆಚ್ಚಿದ ದ್ವೇಷ ಭಾಷಣ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ ಎಸ್ ಓಕಾ

Photo | indianexpress
ಹೊಸದಿಲ್ಲಿ : ಸುಪ್ರೀಂ ಕೋರ್ಟ್‌ಗೆ ಬರುವ ದ್ವೇಷ ಭಾಷಣದ ಪ್ರಕರಣಗಳಲ್ಲಿ ಹೆಚ್ಚಿನವು ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ತುಳಿತಕ್ಕೊಳಗಾದ ವರ್ಗಗಳಾದ ಪರಿಶಿಷ್ಟ ಜಾತಿಗೆ ಸಂಬಂಧಿಸಿದ ಪ್ರಕರಣವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಎಸ್ ಓಕಾ ಹೇಳಿದರು.
ಕೊಲಂಬಿಯಾ ಕಾನೂನು ಶಾಲೆ(Columbia Law School)ಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾಯಮೂರ್ತಿ ಓಕಾ, ಈ ವರ್ಷ ಜನವರಿ 26ರಂದು ಸಂವಿಧಾನದ ಅಸ್ತಿತ್ವಕ್ಕೆ ಬಂದ 75 ವರ್ಷಗಳನ್ನು ಆಚರಿಸಿದೆವು. ಆದರೆ 75 ವರ್ಷಗಳ ನಂತರವೂ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದ್ವೇಷ ಭಾಷಣಗಳು ಕಂಡು ಬರುತ್ತಿದೆ. ಭಾರತದಲ್ಲಿ ಹೆಚ್ಚಿನ ದ್ವೇಷ ಭಾಷಣಗಳು ಧಾರ್ಮಿಕ ಅಲ್ಪಸಂಖ್ಯಾತರು ಅಥವಾ ತುಳಿತಕ್ಕೊಳಗಾದ ವರ್ಗಗಳ ವಿರುದ್ಧವಾಗಿವೆ. ಚುನಾವಣಾ ಲಾಭಕ್ಕಾಗಿ ರಾಜಕೀಯ ನಾಯಕರು ದ್ವೇಷ ಭಾಷಣ ಮಾಡುತ್ತಾರೆ. ಬಹುಸಂಖ್ಯಾತ ಸಮುದಾಯವನ್ನು ಪ್ರಚೋದಿಸಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಿ ಸಾಮಾಜಿಕ ಸೌಹಾರ್ದತೆ ಕದಡಲು ಇಂತಹ ಭಾಷಣಗಳನ್ನು ಮಾಡಲಾಗುತ್ತಿದೆ. ದ್ವೇಷ ಭಾಷಣಗಳು ಸಾಮಾಜಿಕ ಸಾಮರಸ್ಯವನ್ನು ಹಾಳುಮಾಡುತ್ತವೆ. ದ್ವೇಷದ ಮಾತುಗಳಿಗೆ ರಾಜಕೀಯ ಕಾರಣಗಳೂ ಇರಬಹುದು ಎಂದು ಹೇಳಿದರು.
ಇಂತಹ ಭಾಷಣಗಳು ಭಾರತೀಯ ದಂಡ ಸಂಹಿತೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯಡಿ ಅಪರಾಧವಾಗಿದ್ದರೂ, ಅದನ್ನು ತಡೆಯಲು ಪರಿಣಾಮಕಾರಿ ಮಾರ್ಗವೆಂದರೆ ಜನರಲ್ಲಿ ಅರಿವು ಮೂಡಿಸುವುದಾಗಿದೆ. ನಮ್ಮ ಪೀಠಿಕೆಯಲ್ಲಿ ನಾಗರಿಕರಿಗೆ ವಿವಿಧ ಸ್ವಾತಂತ್ರ್ಯಗಳ ಭರವಸೆ ನೀಡಲಾಗಿದೆ. ಸಂವಿಧಾನದ ಪೀಠಿಕೆಯಲ್ಲಿ ಸಹೋದರತ್ವದ ಬಗ್ಗೆ ಹೇಳಲಾಗಿದೆ. ನಾವು ಭ್ರಾತೃತ್ವದ ಬಗ್ಗೆ ಜನಸಾಮಾನ್ಯರಿಗೆ ಶಿಕ್ಷಣ ನೀಡಲು ಸಾಧ್ಯವಾದರೆ. ದ್ವೇಷ ಭಾಷಣಗಳು ಕಡಿಮೆಯಾಗುತ್ತವೆ. ಜನಸಾಮಾನ್ಯರಿಗೆ ಶಿಕ್ಷಣ ನೀಡುವ ಮೂಲಕ ಅವರ ಮನಸ್ಸನ್ನು ಬಲಪಡಿಸಬಹುದು ಎಂದು ನ್ಯಾಯಮೂರ್ತಿ ಎಎಸ್ ಓಕಾ ಹೇಳಿದರು.
ದ್ವೇಷ ಭಾಷಣದ ವಿರುದ್ಧದ ಕ್ರಮವು ವಾಕ್ ಸ್ವಾತಂತ್ರ್ಯವನ್ನು ಉಲ್ಲಂಘಿಸುವಂತೆ ಮಾಡಬಾರದು. ಅವರು ಇತ್ತೀಚೆಗೆ ನೀಡಿದ ತೀರ್ಪೊಂದನ್ನು ಉಲ್ಲೇಖಿಸಿದರು. ಕೆಲವೊಂದು ದ್ವೇಷದ ಭಾಷಣವನ್ನು ನೀಡಲಾಗಿದೆ ಎಂದು ಯಾರೋ ಹೇಳಬಹುದು. ಕೆಲವು ವ್ಯಕ್ತಿಗಳು ಹಾಗೆ ಯೋಚಿಸುವುದರಿಂದ ಅದು ದ್ವೇಷದ ಭಾಷಣವಾಗುವುದಿಲ್ಲ. ಇದು ವೈಯಕ್ತಿಕ ಗ್ರಹಿಕೆಗಳನ್ನು ಆಧರಿಸಿರಬಾರದು. ಆಗಿದ್ದರೆ ನೀವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಿತದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಿದ್ದರೆ ಕಲೆ, ಸಾಹಿತ್ಯಕ್ಕೆ ಉತ್ತೇಜನವಿಲ್ಲ. ಕಾಂಗ್ರೆಸ್ ರಾಜ್ಯಸಭಾ ಸಂಸದ ಇಮ್ರಾನ್ ಪ್ರತಾಪ್ ಘರ್ಹಿ ವಿರುದ್ಧದ ಇನ್ಸ್ಟಾಗ್ರಾಮ್ ಪೋಸ್ಟ್‌ಗೆ ಸಂಬಂಧಿಸಿದ ಇತ್ತೀಚಿನ ಪೋಸ್ಟ್‌ನ್ನು ಅವರು ಉಲ್ಲೇಖಿಸಿದರು. ತೀರ್ಪಿನಲ್ಲಿ, ನಾವು ಕಲೆ, ವಿಡಂಬನೆ, ಸ್ಟ್ಯಾಂಡ್-ಅಪ್ ಕಾಮಿಡಿಯ ವಿವಿಧ ಅಂಶಗಳನ್ನು ಉಲ್ಲೇಖಿಸಿದ್ದೇವೆ. ಇದನ್ನು ಪಾಲಿಸದಿದ್ದರೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದಂತೆ, ಜೀವನಕ್ಕೆ ಯಾವುದೇ ಘನತೆ ಇರುವುದಿಲ್ಲ. ಗೌರವದಿಂದ ಬದುಕುವ ಹಕ್ಕು ಇಲ್ಲವಾಗುತ್ತದೆ ಎಂದು ನ್ಯಾಯಮೂರ್ತಿ ಎಎಸ್ ಓಕಾ ಹೇಳಿದರು.