ಸಂಪೂರ್ಣ ಡಿಜಿಟಲ್ ಸಾಕ್ಷರತೆ ಸಾಧಿಸಿದ ಮೊದಲ ರಾಜ್ಯ ಕೇರಳ
PC - thehindu
ತಿರುವನಂತಪುರ: ನರೇಗಾ ಯೋಜನೆಯಡಿ ದುಡಿಯತ್ತಿರುವ ತಿರುವನಂತಪುರದ ಪುಲ್ಲಂಪಾರ ನಿವಾಸಿ ಸಿ.ಸರಸು(67) ಕಳೆದ ಕೆಲವು ತಿಂಗಳುಗಳಿಂದ ತನ್ನ ವಿರಾಮದ ಸಮಯವನ್ನು ಸಂಬಂಧಿಗಳಿಗೆ ವೀಡಿಯೊ ಕರೆಗಳನ್ನು ಮಾಡುವುದರಲ್ಲಿ ಮತ್ತು ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸುವುದರಲ್ಲಿ ಕಳೆಯುತ್ತಿದ್ದಾರೆ. ಅತ್ತ ಮೂವಾಟ್ಟುಪುಳದಲ್ಲಿ ಕೃಷ್ಣಕುಮಾರ(75) ಮಾದಕ ದ್ರವ್ಯ ವಿರೋಧಿ ಅಭಿಯಾನಕ್ಕೆ ನೆರೆಹೊರೆಯ ಜನರನ್ನು ಸಜ್ಜುಗೊಳಿಸಲು ವಾಟ್ಸ್‌ಆ್ಯಪ್‌ನ್ನು ಬಳಸುತ್ತಿದ್ದಾರೆ. ಇತ್ತೀಚಿನವರೆಗೂ ‘ಡಿಜಿಟಲ್ ಅನಕ್ಷರಸ್ಥ’ರಾಗಿದ್ದ ಅವರಿಬ್ಬರಿಗೂ ತಂತ್ರಜ್ಞಾನ ಎನ್ನುವುದು ಕಬ್ಬಿಣದ ಕಡಲೆಯಾಗಿತ್ತು.
ಈ ಇಬ್ಬರೂ ಈಗ ಸ್ಥಳೀಯ ಸ್ವಯಂ-ಸರಕಾರ (ಎಲ್‌ಎಸ್‌ಜಿ) ಇಲಾಖೆಯ ‘ಡಿಜಿ ಕೇರಳ’ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮವನ್ನು ಪೂರ್ಣಗೊಳಿಸಿರುವ 21 ಲಕ್ಷಕ್ಕೂ ಅಧಿಕ ಜನರಲ್ಲಿ ಸೇರಿದ್ದು, ಕೇರಳವೀಗ ಸಂಪೂರ್ಣ ಡಿಜಿಟಲ್ ಸಾಕ್ಷರತೆಯನ್ನು ಸಾಧಿಸಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಎಲ್‌ಎಸ್‌ಜಿ ಸಚಿವ ಎಂ.ಬಿ.ರಾಜೇಶ ಅವರು ಸರಕಾರವು ಅಧಿಕೃತವಾಗಿ ಘೋಷಿಸಲು ಕಾರ್ಯಕ್ರಮಕ್ಕಾಗಿ ರಾಷ್ಟ್ರಪತಿಗಳ ದೃಢೀಕರಣಕ್ಕಾಗಿ ಕಾಯುತ್ತಿದೆ ಎಂದು ತಿಳಿಸಿದರು.
‘ಡಿಜಿಟಲ್ ಸಾಕ್ಷರತೆಗಾಗಿ ರಾಷ್ಟ್ರೀಯ ಡಿಜಿಟಲ್ ಸಾಕ್ಷರತಾ ಮಿಷನ್ ನಿಗದಿಪಡಿಸಿದ್ದ ಮಾರ್ಗಸೂಚಿಗಳನ್ನು ಮೀರಿ ನಾವು ಹೆಚ್ಚಿನದನ್ನು ಸಾಧಿಸಿದ್ದೇವೆ. ಮಾರ್ಗಸೂಚಿಗಳ ಪ್ರಕಾರ 60 ವರ್ಷಗಳವರೆಗಿನ ವಯೋಮಾನದವರಿಗೆ ಮಾತ್ರ ತರಬೇತಿಯನ್ನು ನೀಡಬೇಕು,ಆದರೆ ನಮ್ಮ ಕಾರ್ಯಕ್ರಮವು ಎಲ್ಲ ವಯೋಮಾನದವರನ್ನೂ ಒಳಗೊಂಡಿದೆ’ ಎಂದು ರಾಜೇಶ ತಿಳಿಸಿದರು.
ಡಿಜಿ ಕೇರಳ ಪರಿಕಲ್ಪನೆಯು ಎಲ್ಲ ನಿವಾಸಿಗಳನ್ನು ಡಿಜಿಟಲ್ ಸಾಕ್ಷರರನ್ನಾಗಿಸಲು ಪುಲ್ಲಂಪರ ಗ್ರಾಮ ಪಂಚಾಯತ್‌ನ ಪ್ರಾಯೋಗಿಕ ಉಪಕ್ರಮವಾಗಿ 2022ರಲ್ಲಿ ಆರಂಭಗೊಂಡಿತ್ತು. ತರಬೇತಿಯಲ್ಲಿ ಪಾಲ್ಗೊಂಡವರು ಮೊದಲ ಬಾರಿಗೆ ಡಿಜಿಟಲ್ ಸಾಧನಗಳನ್ನು ಬಳಸಲಾರಂಭಿಸಿದ್ದರು. ಸ್ಮಾರ್ಟ್ ಫೋನ್‌ಗಳನ್ನು ಬಳಸಿಕೊಂಡು ಧ್ವನಿಕರೆಗಳು ಮತ್ತು ವೀಡಿಯೊ ಕರೆಗಳನ್ನು ಮಾಡುವುದನ್ನು,ವಾಟ್ಸ್ಯಾಪ್ ಬಳಸುವುದನ್ನು,ಸರಕಾರಿ ಸೇವೆಗಳ ಪೋರ್ಟಲ್‌ಗಳನ್ನು ಪ್ರವೇಶಿಸುವುದನ್ನು,ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವುದನ್ನು ಅವರಿಗೆ ಕಲಿಸಲಾಗಿತ್ತು.
ಬಳಿಕ ಸರಕಾರವು ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿತ್ತು. ರಾಜ್ಯಾದ್ಯಂತ ವಾರ್ಡ್‌ಗಳಲ್ಲಿ ಸಮೀಕ್ಷೆಗಳ ಮೂಲಕ 21.88 ಲಕ್ಷ ಡಿಜಿಟಲ್ ಅನಕ್ಷರಸ್ಥರನ್ನು ಗುರುತಿಸಲಾಗಿತ್ತು. ಇವರನ್ನು ಡಿಜಿಟಲ್ ಸಾಕ್ಷರರನ್ನಾಗಿಸಲು ಮನೆಗಳು,ನರೇಗಾ ಸೈಟ್‌ಗಳು,ಗ್ರಂಥಾಲಯಗಳು ಮತ್ತು ಕುಟುಂಬ ಶ್ರೀ ಗುಂಪುಗಳಲ್ಲಿ ತರಗತಿಗಳನ್ನು ಆಯೋಜಿಸಲಾಗಿದ್ದು,ಇದಕ್ಕಾಗಿ 2.57 ಲಕ್ಷ ಸ್ವಯಂಸೇವಕರ ದೊಡ್ಡ ಪಡೆಯನ್ನೇ ಬಳಸಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಕ್ರಮ ಪೂರ್ಣಗೊಂಡ ಬಳಿಕ ನಡೆಸಲಾದ ಮೌಲ್ಯಮಾಪನದಲ್ಲಿ ಭಾಗಿಯಾಗಿದ್ದವರ ಪೈಕಿ ಶೇ.98ರಷ್ಟು ಜನರು ತೇರ್ಗಡೆಗೊಂಡಿದ್ದಾರೆ.
ಕೃಪೆ: thehindu.com