'ವೋಟ್‌ಬ್ಯಾಂಕ್ ವೈರಸ್' ಕಚ್ಚಿದೆ : ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿದ ಕಾಂಗ್ರೆಸ್‌ಗೆ ಮೋದಿ ಟೀಕೆ

ನರೇಂದ್ರ ಮೋದಿ | PTI
ಹರ್ಯಾಣ : ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿದ್ದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ಗೆ ʼವೋಟ್‌ಬ್ಯಾಂಕ್ ವೈರಸ್ʼ ಕಚ್ಚಿದೆ ಎಂದು ಹೇಳಿದ್ದಾರೆ.
ಹರ್ಯಾಣದ ಹಿಸಾರ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಮ್ಮ ಪವಿತ್ರ ಸಂವಿಧಾನವನ್ನು ಅಧಿಕಾರದ ಅಸ್ತ್ರವನ್ನಾಗಿ ಪರಿವರ್ತಿಸಿತು. ಕಾಂಗ್ರೆಸ್ ಅಧಿಕಾರಕ್ಕೆ ಬೆದರಿಕೆಯನ್ನು ಅನುಭವಿಸಿದಾಗಲೆಲ್ಲಾ ಸಂವಿಧಾನವನ್ನು ತುಳಿಯಿತು. ಸ್ವಂತ ಲಾಭಕ್ಕಾಗಿ ಸಾಮಾಜಿಕ ನ್ಯಾಯದ ಬಿಆರ್ ಅಂಬೇಡ್ಕರ್ ಅವರ ಸಂವಿಧಾನದ ದೃಷ್ಟಿಕೋನಕ್ಕೆ ಕಾಂಗ್ರೆಸ್ ಪಕ್ಷವು ದ್ರೋಹ ಮಾಡಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರ ಸಮಾನತೆಯ ದೃಷ್ಟಿಕೋನವನ್ನು ಕಾಂಗ್ರೆಸ್ ಕಡೆಗಣಿಸಿ ವೋಟ್ ಬ್ಯಾಂಕ್ ರಾಜಕೀಯದ ವೈರಸ್‌ನ್ನು ಹರಡುತ್ತಿದೆ. ಬಾಬಾಸಾಹೇಬರು ಪ್ರತಿಯೋರ್ವ ಬಡವರು, ಹಿಂದುಳಿದವರು ಗೌರವದಿಂದ ತಲೆ ಎತ್ತಿ ಬದುಕಬೇಕು ಎಂದು ಬಯಸಿದ್ದರು ಎಂದು ಮೋದಿ ಹೇಳಿದರು.
ವಕ್ಫ್ ತಿದ್ದುಪಡಿ ಕಾಯಿದೆ ಬಗ್ಗೆ ಉಲ್ಲೇಖಿಸಿದ ಪ್ರಧಾನಿ ಮೋದಿ, ವಕ್ಫ್ ಹೆಸರಿನಲ್ಲಿ ಲಕ್ಷಗಟ್ಟಲೆ ಹೆಕ್ಟೇರ್ ಭೂಮಿ ಇದೆ, ವಕ್ಫ್ ಆಸ್ತಿಯಿಂದ ನಿರ್ಗತಿಕರಿಗೆ ಸವಲತ್ತು ನೀಡಿದ್ದರೆ ಅದರಿಂದ ಅವರಿಗೆ ಅನುಕೂಲವಾಗುತ್ತಿತ್ತು. ಆದರೆ ಅವರಿಗೆ ಅನುಕೂಲವಾಗಿಲ್ಲ. ಭೂಮಾಫಿಯಾ ಈ ಆಸ್ತಿಗಳಿಂದ ಲಾಭ ಪಡೆದಿದೆ. ತಿದ್ದುಪಡಿ ಕಾಯಿದೆಯಿಂದ ಬಡ ಮುಸ್ಲಿಮರಿಗೆ ನ್ಯಾಯ ಸಿಗುತ್ತದೆ ಮತ್ತು ಬಡವರ ಲೂಟಿ ನಿಲ್ಲುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಎಂದಿಗೂ ಸಂವಿಧಾನವನ್ನು ಮುಸ್ಲಿಮರು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಅನುಕೂಲವಾಗುವಂತೆ ಬಳಸಲಿಲ್ಲ.ಕಾಂಗ್ರೆಸ್ ಎಸ್ಸಿ, ಎಸ್ಟಿ ಮತ್ತು ಒಬಿಸಿಗಳನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಿದೆ ಎಂದು ಮೋದಿ ಹೇಳಿದರು.