ಕಳೆದ 11 ವರ್ಷಗಳಲ್ಲಿ ನ್ಯಾಯಾಲಯದಲ್ಲಿ ಮೊಕದ್ದಮೆಗಳಿಗೆ 561.08 ಕೋಟಿ ರೂ. ವೆಚ್ಚ ಮಾಡಿದ ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೇಂದ್ರ ಸರಕಾರವು 2014-15 ಮತ್ತು 2024-25 ಡಿಸೆಂಬರ್ ನಡುವೆ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳಿಗಾಗಿ 561.09 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸಂಬಂಧಿಸಿದ 7.18 ಲಕ್ಷ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯುಳಿದಿದ್ದು, ಹಣಕಾಸು ಸಚಿವಾಲಯವು 1.93 ಲಕ್ಷ ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು deccanherald.com ವರದಿ ಮಾಡಿದೆ.
ಕಾನೂನು ಮತ್ತು ನ್ಯಾಯ ಸಚಿವಾಲಯದ ಅನುದಾನಗಳ(2025-26) ಬೇಡಿಕೆಯನ್ನು ಪರಿಶೀಲಿಸಿದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿಗೆ ಈ ದತ್ತಾಂಶಗಳನ್ನು ಲಭ್ಯವಾಗಿಸಲಾಗಿದೆ.
ಸಮಿತಿಯು ತನ್ನ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ ಎರಡು ವಾರಗಳಲ್ಲಿ, ಎ.4ರಂದು ಸಚಿವಾಲಯವು ಅನಪೇಕ್ಷಿತ ಮೊಕದ್ದಮೆಗಳನ್ನು ತಡೆಯಲು,ಅನಗತ್ಯ ಮೇಲ್ಮನವಿಗಳನ್ನು ಕಡಿಮೆಗೊಳಿಸಲು ಹಾಗೂ ಪ್ರಕರಣಗಳ ಹೊರೆಯನ್ನು ತಗ್ಗಿಸುವ ದೃಷ್ಟಿಯಿಂದ ಅಧಿಸೂಚನೆಗಳು ಮತ್ತು ಆದೇಶಗಳಲ್ಲಿನ ಅಸಮಂಜಸತೆಗಳನ್ನು ನಿವಾರಿಸಲು ನಿರ್ದೇಶನವನ್ನು ಹೊರಡಿಸಿದೆ.
ಮೊಕದ್ದಮೆಗಳ ವೆಚ್ಚಗಳಲ್ಲಿ ಕೆಲವು ವರ್ಷಗಳಲ್ಲಿ ಇಳಿಕೆ ಕಂಡುಬಂದಿದೆಯಾದರೂ ಅದು ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ಎನ್ನುವುದನ್ನು ಸಮಿತಿಯ ವರದಿಯು ತೋರಿಸಿದೆ.
ಸರಕಾರವು 2014-15ರಲ್ಲಿ ಮೊಕದ್ದಮೆಗಳಿಗಾಗಿ 26.64 ಕೋಟಿ ರೂ.ಗಳನ್ನು ವೆಚ್ಚ ಮಾಡಿದ್ದರೆ ನಂತರದ ಮೂರು ಹಣಕಾಸು ವರ್ಷಗಳಲ್ಲಿ ವೆಚ್ಚವು ಅನುಕ್ರಮವಾಗಿ 37.43 ಕೋಟಿ ರೂ.,48.12 ಕೋಟಿ ರೂ. ಮತ್ತು 65.83 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. 2018-19ರಲ್ಲಿ ಈ ವೆಚ್ಚವು 51.85 ಕೋಟಿ ರೂ.ಗೆ ಇಳಿಕೆಯಾಗಿತ್ತು.
2019-20ರಲ್ಲಿ ವೆಚ್ಚ 61.08 ಕೋಟಿ ರೂ.ಗೆ ಹೆಚ್ಚಿದ್ದು, ಕೋವಿಡ್ ಸಂದರ್ಭದಲ್ಲಿ 2020-21 ಮತ್ತು 2021-22ರಲ್ಲಿ ಅನುಕ್ರಮವಾಗಿ 58.43 ಕೋಟಿ ರೂ.ಮತ್ತು 48.56 ಕೋಟಿ ರೂ.ಗಳಿಗೆ ಇಳಿಕೆಯಾಗಿತ್ತು. 2022-23ರಲ್ಲಿ ವೆಚ್ಚ 57.45 ಕೋಟಿ ರೂ.ಗಳಿಗೆ ಏರಿಕೆಯಾಗಿದ್ದು,2023-24ರಲ್ಲಿ ಅದು 66.67 ಕೋಟಿ ರೂ. ಹೆಚ್ಚುವ ಮೂಲಕ ಕಳೆದ ಹತ್ತು ವಿತ್ತವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಿತ್ತು.
ಅಧಿಕೃತ ದತ್ತಾಂಶಗಳ ಪ್ರಕಾರ 2024-25ರಲ್ಲಿ ಡಿ.31ರವರೆಗೆ 39.06 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
ಸರ್ವೋಚ್ಚ ನ್ಯಾಯಾಲಯಗಳು,ಉಚ್ಚ ನ್ಯಾಯಾಲಯಗಳು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳು ಹಾಗೂ ನ್ಯಾಯಾಧಿಕರಣಗಳಲ್ಲಿ ಬಾಕಿಯಳಿದಿರುವ 7.18 ಲಕ್ಷ ಪ್ರಕರಣಗಳ ಪೈಕಿ 1.15 ಲಕ್ಷ ಪ್ರಕರಣಗಳೊಂದಿಗೆ ಭಾರತೀಯ ರೈಲ್ವೆಯು ವಿತ್ತ ಸಚಿವಾಲಯದ ನಂತರದ ಸ್ಥಾನದಲ್ಲಿದೆ. ರಕ್ಷಣಾ ಸಚಿವಾಲಯವು 96,526 ಪ್ರಕರಣಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಸಹಕಾರ ಸಚಿವಾಲಯವು ಕೇವಲ ಒಂದು ಪ್ರಕರಣವನ್ನು ಹೊಂದಿದ್ದರೆ ಸಂಸದೀಯ ವ್ಯವಹಾರಗಳ ಸಚಿವಾಲಯ ಮೂರು,ಪಂಚಾಯತ್ ರಾಜ್ ಸಚಿವಾಲಯ 13 ಮತ್ತು ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವಾಲಯ 17 ಪ್ರಕರಣಗಳನ್ನು ಹೊಂದಿವೆ.