ಪ್ರಯಾಗ್‌ರಾಜ್ ನ ಬುಲ್ಡೋಝರ್ ಕಾರ್ಯಾಚರಣೆ ‘ಅಮಾನವೀಯ ಮತ್ತು ಕಾನೂನುಬಾಹಿರ’: ಸುಪ್ರೀಂ ಕೋರ್ಟ್

Update: 2025-04-01 17:12 IST
Supreme court of India

ಸುಪ್ರೀಂ ಕೋರ್ಟ್ | PC: PTI

  • whatsapp icon

ಲಕ್ನೋ: ವಕೀಲ, ಪ್ರಾಧ್ಯಾಪಕ ಸೇರಿದಂತೆ ಆರು ಜನರ ಮನೆಗಳನ್ನು ಬುಲ್ಡೋಝರ್ ಬಳಸಿ ಕೆಡವಿದ ಉತ್ತರ ಪ್ರದೇಶದ ಬಿಜೆಪಿ ಸರಕಾರದ ಕ್ರಮವನ್ನು ‘ಅಮಾನವೀಯ ಮತ್ತು ಕಾನೂನುಬಾಹಿರ’ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಸಂತ್ರಸ್ತರಿಗೆ ಆರು ವಾರಗಳಲ್ಲಿ ತಲಾ 10 ಲಕ್ಷ ರೂಪಾಯಿಗಳನ್ನು ಪಾವತಿಸಲು ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಅಭಯ್‌ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು, “ಮೇಲ್ಮನವಿ ಸಲ್ಲಿಸಿದವರಿಗೆ ಮನೆ ಕೆಡವುವ ಮುನ್ನ ಪ್ರತಿಕ್ರಿಯೆ ನೀಡಲು ಪ್ರಾಧಿಕಾರವು ಅವಕಾಶ ನೀಡಿರಲಿಲ್ಲ” ಎಂದು ಹೇಳಿದೆ.

“ಧ್ವಂಸ ಪ್ರಕ್ರಿಯೆಯನ್ನು ಬುಲ್ಡೋಝರ್ ಬಳಸಿ ಭಯಾನಕವಾಗಿ ನಡೆಸಲಾಗಿದೆ. ಈ ದೇಶದಲ್ಲಿ ಕಾನೂನಿನ ಆಳ್ವಿಕೆ ಇದೆ. ನಾಗರಿಕರ ಮನೆಗಳನ್ನು ಈ ರೀತಿ ಕೆಡವಲು ಸಾಧ್ಯವಿಲ್ಲ. ಆಶ್ರಯ ಅಥವಾ ವಸತಿ ಹಕ್ಕು ಭಾರತದ ಸಂವಿಧಾನದ 21ನೇ ವಿಧಿಯ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಅಧಿಕಾರಿಗಳು ಮತ್ತು ವಿಶೇಷವಾಗಿ ಪ್ರಯಾಗ್‌ರಾಜ್‌ ಅಭಿವೃದ್ಧಿ ಪ್ರಾಧಿಕಾರ ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ನ್ಯಾಯಾಲಯವು ಕಾರ್ಯಾಚರಣೆಗೆ ಆಕ್ಷೇಪ ವ್ಯಕ್ತಪಡಿಸಿದೆ.

ಈ ಹಿಂದೆ ಸಂತ್ರಸ್ತರು ಮನೆಗಳನ್ನು ಧ್ವಂಸ ನಡೆಸಿರುವುದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಅದನ್ನು ವಜಾಗೊಳಿಸಿತ್ತು. ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಮೇಲ್ಮನವಿಯನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್ ಮಾರ್ಚ್‌ 6ರಂದು ವಿಚಾರಣೆ ವೇಳೆ ಕಾನೂನುಬಾಹಿರವಾಗಿ ಬುಲ್ಡೋಝರ್ ಕಾರ್ಯಾಚರಣೆಯ ಮೂಲಕ ಮನೆಗಳನ್ನು ಕೆಡವಿದ್ದಕ್ಕೆ ಉತ್ತರ ಪ್ರದೇಶದ ಬಿಜೆಪಿ ಸರಕಾರ ಮತ್ತು ಪ್ರಯಾಗ್‌ರಾಜ್‌ ಅಭಿವೃದ್ದಿ ಪ್ರಾಧಿಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ವಿಚಾರಣೆಯ ವೇಳೆ “ಸಂವಿಧಾನದಲ್ಲಿ ವಿಧಿ 21 ಎಂದು ಕರೆಯಲ್ಪಡುವ ಒಂದು ಅಧ್ಯಾಯವಿದೆ” ಎಂದು ನ್ಯಾಯಮೂರ್ತಿ ಓಕಾ ತೀವ್ರವಾಗಿ ಉಲ್ಲೇಖಿಸಿದ್ದರು. ಅಲ್ಲದೇ ಕೆಡವಲಾದ ಕಟ್ಟಡಗಳನ್ನು ನಿಮ್ಮದೇ ಖರ್ಚಿನಲ್ಲಿ ಮರು ನಿರ್ಮಿಸಲು ಸರಕಾರಕ್ಕೆ ಆದೇಶಿಸುತ್ತೇವೆ. ಅದೊಂದೆ ಮಾರ್ಗ ಈಗ ಬಾಕಿಯಿರುವುದು” ಎಂದು ಹೇಳಿದ್ದರು.

ಅರ್ಜಿದಾರರಿಗೆ ನೋಟಿಸ್‌ಗೆ ಉತ್ತರ ನೀಡಲು ಸಾಕಷ್ಟು ಸಮಯ ಇತ್ತು ಎಂದು ಸರಕಾರದ ಪರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾ. ಓಕಾ ಅವರು, ನೋಟಿಸ್ ಜಾರಿ ಮಾಡಿದ ವಿಧಾನವನ್ನು ಪ್ರಶ್ನಿಸಿದ್ದರು. ನೋಟಿಸ್ ಕಳುಹಿಸುವ ವಿಧಾನದ ಕುರಿತ ರಾಜ್ಯದ ವಾದದಲ್ಲಿ ಬದ್ದತೆ ಕೊರತೆಯನ್ನು ಎತ್ತಿ ತೋರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News