ವಕ್ಫ್ ಮಸೂದೆ ಅಂಗೀಕಾರಕ್ಕೆ ಜಮ್ಮು ಕಾಶ್ಮೀರದ ವಿವಿಧ ಪಕ್ಷಗಳ ನಾಯಕರ ವಿರೋಧ
ಶ್ರೀನಗರ: ಜಮ್ಮು ಹಾಗೂ ಕಾಶ್ಮೀರ ವಿಧಾನ ಸಭೆಯ ಸ್ಪೀಕರ್ ಅಬ್ದುರ್ ರಹೀಮ್ ರಾಥರ್ ವಕ್ಫ್ ಮಸೂದೆ ಅಂಗೀಕರಿಸಿರುವುದನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ಇದನ್ನು ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ಎಂದು ಕರೆದಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಥರ್, ಈ ಮಸೂದೆ ತಮ್ಮ ಧರ್ಮವನ್ನು ಮುಕ್ತವಾಗಿ ಅನುಸರಿಸುವ ಹಕ್ಕನ್ನು ಪ್ರತಿಯೋರ್ವ ನಾಗರಿಕನಿಗೆ ನೀಡುವ ಭಾರತೀಯ ಸಂವಿಧಾನದ ಕಲಂ 25 ಅನ್ನು ಉಲ್ಲಂಘಿಸುತ್ತದೆ ಎಂದಿದ್ದಾರೆ.
ಈ ಮಸೂದೆ ವೈಯುಕ್ತಿಕ ಕಾನೂನಿನಲ್ಲಿ ಮಧ್ಯಪ್ರವೇಶಿಸುತ್ತದೆ. ಇಂತಹ ಕ್ರಮಗಳು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.
‘‘ಕಲಂ 25 ವ್ಯಕ್ತಿಗೆ ಯಾವುದೇ ನಿರ್ಬಂಧ ಇಲ್ಲದೆ ತಮ್ಮ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುವ, ಅಭಿವ್ಯಕ್ತಿಸುವ ಹಾಗೂ ಪ್ರಚಾರ ಮಾಡುವ ಸ್ವಾತಂತ್ರ್ಯದ ಖಾತರಿ ನೀಡುತ್ತದೆ. ಈ ಹಕ್ಕುಗಳನ್ನು ಮಸೂದೆ ದುರ್ಬಲಗೊಳಿಸುತ್ತದೆ ಎಂದು ವಿಮರ್ಶಕರು ಭಾವಿಸಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.
ವಕ್ಫ್ ಮಸೂದೆಯನ್ನು ಲೋಕಸಭೆಯಲ್ಲಿ ಬುಧವಾರ 12 ಗಂಟೆಗಳ ಕಾಲ ಚರ್ಚೆ ನಡೆಸುವ ಮೂಲಕ ಅಂಗೀಕರಿಸಲಾಗಿತ್ತು. ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಮಸೂದೆಯ ಪರವಾಗಿ ಮತ ಚಲಾಯಿಸಿದ್ದರೆ, ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಮಸೂದೆಗೆ ವಿರುದ್ಧವಾಗಿ ಮತ ಚಲಾಯಿಸಿತ್ತು.
ಈ ಮಸೂದೆಯ ವಿರುದ್ಧ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ), ಪೀಪಲ್ಸ್ ಕಾನ್ಫರೆನ್ಸ್ (ಪಿಸಿ) ಹಾಗೂ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ) ಸೇರಿದಂತೆ ಜಮ್ಮು ಹಾಗೂ ಕಾಶ್ಮೀರದ ಪ್ರಾದೇಶಿಕ ಪ್ರಕ್ಷಗಳು ಧ್ವನಿ ಎತ್ತಿವೆ.