ಬ್ಯಾಂಕುಗಳು ನನ್ನ ಸಾಲಬಾಕಿಯ ದುಪ್ಪಟ್ಟಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿವೆ: ವಿಜಯ ಮಲ್ಯ

Update: 2025-04-07 20:36 IST
VIJAYA MALYA

ವಿಜಯ ಮಲ್ಯ | PC : PTI 

  • whatsapp icon

ಹೊಸದಿಲ್ಲಿ: ಭಾರತೀಯ ಬ್ಯಾಂಕುಗಳು ತನ್ನ 14,131.6 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದ್ದು,ಈ ಮೊತ್ತವೆ ತಾನು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ನೀಡಬೇಕಿದ್ದ ಸಾಲಬಾಕಿಯ ಎರಡು ಪಟ್ಟಿಗೂ ಅಧಿಕವಾಗಿದೆ ಎಂದು ದೇಶಭ್ರಷ್ಟ ಮದ್ಯದ ದೊರೆ ವಿಜಯ ಮಲ್ಯ ಹೇಳಿಕೊಂಡಿದ್ದಾರೆ.

ಹಣಕಾಸು ಸಚಿವಾಲಯದ 2024-25ರ ವಾರ್ಷಿಕ ವರದಿಯಲ್ಲಿನ ಜಾರಿ ನಿರ್ದೇಶನಾಲಯ (ಈಡಿ)ವು ಉದ್ದೇಶಪೂರ್ವಕ ಸುಸ್ತಿದಾರರಿಂದ ಮಾಡಿರುವ ಮರುವಸೂಲಿ ವಿವರಗಳನ್ನು ಉಲ್ಲೇಖಿಸಿರುವ ಮಲ್ಯ,ಸಾಲ ವಸೂಲಾತಿ ನ್ಯಾಯಮಂಡಳಿ(ಡಿಆರ್‌ಟಿ)ಯು ಆದೇಶಿಸಿದ್ದ 6,203 ಕೋಟಿ ರೂ.ಗಳ ಬದಲಾಗಿ ಬ್ಯಾಂಕುಗಳು ಈಗಾಗಲೇ 14,131.8 ಕೋಟಿ ರೂ.ಗಳನ್ನು ವಸೂಲು ಮಾಡಿಕೊಂಡಿವೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ‘ಈ ಅಂಶವು ಬ್ರಿಟನ್‌ ನಲ್ಲಿ ದಿವಾಳಿತನ ರದ್ದತಿ ಕೋರಿ ನಾನು ಸಲ್ಲಿಸಿರುವ ಅರ್ಜಿಯಲ್ಲಿ ಸಾಕ್ಷ್ಯವಾಗಲಿದೆ. ಬ್ಯಾಂಕುಗಳು ಇಂಗ್ಲಿಷ್ ನ್ಯಾಯಾಲಯದಲ್ಲಿ ಏನು ಹೇಳಲಿವೆ ಎಂಬ ಬಗ್ಗೆ ಕುತೂಹಲವಿದೆ ’ಎಂದು ಬರೆದಿದ್ದಾರೆ.

ಮಲ್ಯ ಮತ್ತು ಇತರ ಹತ್ತು ಜನರು ಸೇರಿದಂತೆ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ವಿವರಗಳನ್ನು ಹಂಚಿಕೊಂಡಿರುವ ಹಣಕಾಸು ಸಚಿವಾಲಯದ ವರದಿಯು,36 ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಒಟ್ಟು 44 ಹಸ್ತಾಂತರ ಮನವಿಗಳನ್ನು ವಿವಿಧ ದೇಶಗಳಿಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ. ಮಲ್ಯ ಪ್ರಕರಣದಲ್ಲಿ ವಶಪಡಿಸಿಕೊಳ್ಳಲಾಗಿರುವ 14,131.6 ಕೋಟಿ ರೂ.ಮೌಲ್ಯದ ಆಸ್ತಿಗಳನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹಸ್ತಾಂತರಿಸಲಾಗಿದೆ ಎಂದೂ ವರದಿಯು ಹೇಳಿದೆ.

ಮಾರ್ಚ್ 2016ರಲ್ಲಿ ಬ್ರಿಟನ್‌ಗೆ ಪರಾರಿಯಾಗಿರುವ ಮಲ್ಯ ಅವರ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ವಿವಿಧ ಬ್ಯಾಂಕುಗಳ ನೀಡಿದ್ದ 9,000 ಕೋಟಿ ರೂ.ಗಳನ್ನು ಮರುಪಾವತಿಸದ್ದಕ್ಕಾಗಿ ಭಾರತದಲ್ಲಿ ವಾಂಟೆಡ್ ವ್ಯಕ್ತಿಯಾಗಿದ್ದಾರೆ. ಅವರನ್ನು ತನಗೆ ಹಸ್ತಾಂತರಿಸುವಂತೆ ಭಾರತ ಸರಕಾರವು ಬ್ರಿಟನ್‌ನ್ನು ಆಗ್ರಹಿಸುತ್ತಲೇ ಇದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News