2023-24ರಲ್ಲಿ ಬಿಜೆಪಿಗೆ ಹರಿದುಬಂದ ದೇಣಿಗೆ 2243 ಕೋಟಿ ರೂ!

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ವಿತ್ತವರ್ಷ 2023-24ರಲ್ಲಿ ರಾಷ್ಟ್ರೀಯ ಪಕ್ಷಗಳ ಪೈಕಿ ಬಿಜೆಪಿಯು 20,000 ರೂ.ಗಿಂತ ಹೆಚ್ಚಿನ ವಂತಿಗೆಗಳ ಮೂಲಕ ಅತ್ಯಂತ ಹೆಚ್ಚಿನ ದೇಣಿಗೆಗಳನ್ನು ಸ್ವೀಕರಿಸಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯಂತೆ ಬಿಜೆಪಿ 8,358 ದೇಣಿಗೆಗಳ ಮೂಲಕ 2,243 ಕೋಟಿ ರೂ.ಗೂ.ಅಧಿಕ ಮೊತ್ತವನ್ನು ಸಂಗ್ರಹಿಸಿರುವುದಾಗಿ ಘೋಷಿಸಿದೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿರುವ ದತ್ತಾಂಶಗಳನ್ನು ಆಧರಿಸಿರುವ ವರದಿಯ ಪ್ರಕಾರ,2023-24ರಲ್ಲಿ ರಾಷ್ಟ್ರೀಯ ಪಕ್ಷಗಳಿಗೆ 20,000 ರೂ.ಗೂ ಅಧಿಕ ದೇಣಿಗೆಗಳ ಮೊತ್ತವು 12,547 ವಂತಿಗೆಗಳ ಮೂಲಕ 2,544.28 ಕೋಟಿ ರೂ.ಗಳಾಗಿದ್ದು,ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.199ರಷ್ಟು ತೀವ್ರ ಏರಿಕೆಯಾಗಿದೆ.
ಒಟ್ಟು ದೇಣಿಗೆಗಳ ಪೈಕಿ ಶೇ.88ರಷ್ಟು ಬಿಜೆಪಿ ಬೊಕ್ಕಸಕ್ಕೆ ಸೇರಿದ್ದರೆ ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ 1,994 ದೇಣಿಗೆಗಳ ಮೂಲಕ 281.48 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಆಪ್,ಸಿಪಿಎಂ,ಸಿಪಿಐ ಮತ್ತು ಎನ್‌ಪಿಇಪಿ ಸಣ್ಣ ಮೊತ್ತದ ದೇಣಿಗೆಗಳನ್ನು ವರದಿ ಮಾಡಿದ್ದರೆ ಬಿಎಸ್‌ಪಿ ತಾನು 20,000 ರೂ.ಗಿಂತ ಹೆಚ್ಚಿನ ಯಾವುದೇ ದೇಣಿಗೆಗಳನ್ನು ಸ್ವೀಕರಿಸಿಲ್ಲ ಎಂದು ಮತ್ತೊಮ್ಮೆ ಘೋಷಿಸಿದೆ. ಕಳೆದ 18 ವರ್ಷಗಳಿಂದ ಅದರ ಘೋಷಣೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
2022-23ರಲ್ಲಿ 719.858 ಕೋಟಿ ರೂ.ಗಳಿದ್ದ ಬಿಜೆಪಿಯ ದೇಣಿಗೆ ಸಂಗ್ರಹ 2023-24ರಲ್ಲಿ 2,243.94 ಕೋಟಿ ರೂ.ಗಳಾಗಿದ್ದು,ಶೇ.211.72 ಏರಿಕೆಯನ್ನು ದಾಖಲಿಸಿದೆ. ಇದೇ ರೀತಿ 79.924 ರೂ.ಗಳಿದ್ದ ಕಾಂಗ್ರೆಸ್‌ನ ದೇಣಿಗೆ ಸಂಗ್ರಹ 281.48 ರೂ.ಆಗಿದೆ(ಶೇ.252.18 ಏರಿಕೆ).
ಇದೇ ಅವಧಿಯಲ್ಲಿ ಆಪ್ 26.038(ಶೇ.70.18 ಏರಿಕೆ) ಮತ್ತು ಎನ್‌ಪಿಇಪಿ 7.331 ಕೋಟಿ ರೂ.(ಶೇ.98.02 ಇಳಿಕೆ)ಮೊತ್ತದ ದೇಣಿಗೆಗಳನ್ನು ಸ್ವೀಕರಿಸಿರುವುದಾಗಿ ಘೋಷಿಸಿವೆ.
ಬಿಎಸ್‌ಪಿ ಮತ್ತು ಆಪ್ ಮಾತ್ರ ಚುನಾವಣಾ ಆಯೋಗದ ಸೆ.30,2024ರ ಗಡುವಿನೊಳಗೆ ತಮ್ಮ ದೇಣಿಗೆ ವಿವರಗಳನ್ನು ಸಲ್ಲಿಸಿದ್ದರೆ,ಬಿಜೆಪಿ 42 ದಿನ,ಸಿಪಿಎಂ 43 ದಿನ,ಕಾಂಗ್ರೆಸ್ 27 ಮತ್ತು ಎನ್‌ಪಿಇಪಿ 23 ದಿನಗಳ ವಿಳಂಬದೊಂದಿಗೆ ವರದಿಗಳನ್ನು ಸಲ್ಲಿಸಿದ್ದವು.
2023-24ರಲ್ಲಿ ರಾಷ್ಟ್ರೀಯ ಪಕ್ಷಗಳು ಕಾರ್ಪೊರೇಟ್ ಮತ್ತು ಉದ್ಯಮ ಸಂಸ್ಥೆಗಳಿಂದ 3,755 ದೇಣಿಗೆಗಳ ಮೂಲಕ 2,262.55 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು,ಇದು ಎಲ್ಲ ದೇಣಿಗೆಗಳ ಶೇ.88.92ರಷ್ಟಿದೆ. ಇದಕ್ಕೆ ವ್ಯತಿರಿಕ್ತವಾಗಿ 8,493 ವ್ಯಕ್ತಿಗಳು ಒಟ್ಟು 270.87 ಕೋಟಿ ರೂ.(ಶೇ.10.64)ಗಳ ದೇಣಿಗೆಗಳನ್ನು ನೀಡಿದ್ದಾರೆ.
ಬಿಜೆಪಿ ಕಾರ್ಪೊರೇಟ್ ದೇಣಿಗೆಗಳ ಮೂಲಕ 2,064.58 ಕೋಟಿ ರೂ.ಗಳನ್ನು ಮತ್ತು ವ್ಯಕ್ತಿಗಳ ಮೂಲಕ 169.13 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಕಾಂಗ್ರೆಸ್ ಅನುಕ್ರಮವಾಗಿ 190.3263 ಕೋಟಿ ರೂ. ಮತ್ತು 90.899 ಕೋಟಿ ರೂ.ಗಳ ದೇಣಿಗೆಗಳನ್ನು ಸಂಗ್ರಹಿಸಿದೆ ಎಂದು ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ.