ಮಧ್ಯ ಪ್ರದೇಶ | ಏಳು ರೋಗಿಗಳ ಸಾವಿಗೆ ಕಾರಣನಾಗಿದ್ದ ನಕಲಿ ಹೃದ್ರೋಗ ತಜ್ಞನ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ | PC : freepik.com
ಭೋಪಾಲ: ಮಧ್ಯಪ್ರದೇಶದ ದಾಮೋಹ್‌ನಲ್ಲಿ ಏಳು ರೋಗಿಗಳ ಸಾವಿಗೆ ಕಾರಣನಾಗಿದ್ದ ನಕಲಿ ಹೃದ್ರೋಗ ತಜ್ಞನ ವಿರುದ್ಧ ಸ್ಥಳೀಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಾಮೋಹ್ ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ(ಸಿಎಂಎಚ್‌ಒ) ಡಾ.ಎಂ.ಕೆ.ಜೈನ್ ಅವರು ರವಿವಾರ ಮಧ್ಯರಾತ್ರಿಯ ಬಳಿಕ ಸಲ್ಲಿಸಿದ ದೂರಿನ ಮೇರೆಗೆ ಡಾ.ನರೇಂದ್ರ ಜಾನ್ ಕ್ಯಾಮ್ ವಿರುದ್ಧ ಪ್ರಕರಣ ದಾಖಲಾಗಿದೆ.
ಎಫ್‌ಐಆರ್ ದಾಮೋಹ್‌ನ ಖಾಸಗಿ ಮಿಷನ್ ಆಸ್ಪತ್ರೆಯಲ್ಲಿ ಡಾ.ಕ್ಯಾಮ್ ಆ್ಯಂಜಿಯೊಗ್ರಫಿ ಮತ್ತು ಆ್ಯಂಜಿಯೊಪ್ಲಾಸ್ಟಿ ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ಏಳು ರೋಗಿಗಳು ಮೃತಪಟ್ಟಿದ್ದಾರೆ ಎಂಬ ಆರೋಪಗಳ ಕುರಿತು ಸಿಎಂಎಚ್‌ಒ ನೇತೃತ್ವದ ಸರಕಾರಿ ವೈದ್ಯರ ತಂಡವು ನಡೆಸಿದ ತನಿಖೆಯ ವರದಿಯನ್ನು ಆಧರಿಸಿದೆ.
ದಾಮೋಹ್ ಜಿಲ್ಲಾಧಿಕಾರಿ ಸುಧೀರ ಕೊಚಾರ್ ನಿರ್ದೇಶನದ ಮೇರೆಗೆ ಸರಕಾರಿ ವೈದ್ಯರ ತಂಡವು ನಡೆಸಿದ ತನಿಖೆಯು ಡಾ.ಕ್ಯಾಮ್ ಮಧ್ಯಪ್ರದೇಶ ವೈದ್ಯಕೀಯ ಮಂಡಳಿಯಲ್ಲಿ ಯಾವುದೇ ನೋಂದಣಿಯಿಲ್ಲದೆ ಹೃದಯ ಚಿಕಿತ್ಸೆಗಳನ್ನು ನಡೆಸಿದ್ದನ್ನು ಬಹಿರಂಗಗೊಳಿಸಿದೆ.
ಡಾ.ಕ್ಯಾಮ್ ನಿಜವಾದ ನಾಮಧೇಯ ನರೇಂದ್ರ ವಿಕ್ರಮಾದಿತ್ಯ ಯಾದವ ಆಗಿದ್ದು, ಜುಲೈ 2023ರಲ್ಲಿ ಬ್ರಿಟನ್ನಿನ ಖ್ಯಾತ ಹೃದ್ರೋಗ ತಜ್ಞ ಎನ್.ಜಾನ್ ಕ್ಯಾಮ್ ಅವರ ಹೆಸರನ್ನೇ ಹೋಲುವ ಹೆಸರಿನೊಂದಿಗೆ ಎಕ್ಸ್ ಪೋಸ್ಟ್‌ನಲ್ಲಿ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ದಂಗೆಗಳನ್ನು ನಿಯಂತ್ರಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಅಲ್ಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದ್ದ. ಈತ ತೆಲಂಗಾಣದಲ್ಲಿ ಕ್ರಿಮಿನಲ್ ಪ್ರಕರಣವೊಂದರಲ್ಲಿ ವಾಂಟೆಡ್ ಆರೋಪಿಯೂ ಆಗಿದ್ದಾನೆ.
ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯ ಪ್ರಿಯಾಂಕ್ ಕಾನೂಂಗೊ ಆದೇಶದ ಮೇರೆಗೆ ಆಯೋಗದ ತಂಡವೊಂದು ಪ್ರಕರಣದ ತನಿಖೆಗಾಗಿ ಸೋಮವಾರ ದಾಮೋಹ್ ಗೆ ಆಗಮಿಸಿದೆ.