"ಇದಕ್ಕೆಲ್ಲ ನಾವು ಹೆದರುವುದಿಲ್ಲ": ʼಎಂಪುರಾನ್ʼ ನಿರ್ದೇಶಕ ಪೃಥ್ವಿರಾಜ್ ಗೆ ಐಟಿ ನೋಟಿಸ್ ಕುರಿತು ತಾಯಿ ಮಲ್ಲಿಕಾ ಸುಕುಮಾರನ್ ಪ್ರತಿಕ್ರಿಯೆ

Update: 2025-04-07 16:50 IST
Prithviraj Sukumaran

Photo: Instagram/ Prithviraj Sukumaran

  • whatsapp icon

ತಿರುವನಂತಪುರ: ತನ್ನ ಪುತ್ರನಿಗೆ ಆದಾಯ ತೆರಿಗೆ ಇಲಾಖೆಯ ನೋಟಿಸ್ ಕುರಿತು ಪ್ರತಿಕ್ರಿಯಿಸಿರುವ ನಟ-ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರ ತಾಯಿ ಮಲ್ಲಿಕಾ ಸುಕುಮಾರನ್ ‘ಇದಕ್ಕೆಲ್ಲ ನಾವು ಹೆದರುವುದಿಲ್ಲ’ ಎಂದು ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಕಳೆದ ವಾರ ‘ಎಲ್‌2-ಎಂಪುರಾನ್’ ಮಲಯಾಳಂ ಚಿತ್ರದ ನಿರ್ದೇಶಕ ಸುಕುಮಾರನ್‌ಗೆ ಜಾರಿಗೊಳಿಸಿರುವ ನೋಟಿಸ್‌ನಲ್ಲಿ 2022ರಲ್ಲಿ ಅವರು ತನ್ನ ಮೂರು ಸಿನೆಮಾಗಳಿಂದ ಸ್ವೀಕರಿಸಿರುವ ಸಂಭಾವನೆಯ ಕುರಿತು ಸ್ಪಷ್ಟೀಕರಣವನ್ನು ಕೇಳಿದೆ. ಚಿತ್ರದ ಸಹ ನಿರ್ಮಾಪಕ ಗೋಕುಲಂ ಗೋಪಾಲನ್ ವಿರುದ್ಧ ಜಾರಿ ನಿರ್ದೇಶನಾಲಯ(ಈಡಿ)ದ ತನಿಖೆಯ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಲ್ಲಿಕಾ,‘ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಯಾವುದೇ ತನಿಖೆಗೆ ನಾವು ಹೆದರುವುದಿಲ್ಲ’ ಎಂದು ಹೇಳಿದರು. ಈ ವಿಷಯದಲ್ಲಿ ತನ್ನನ್ನು ಮತ್ತು ತನ್ನ ಮಗನನ್ನು ಸಂಪರ್ಕಿಸಿ ಬೆಂಬಲಿಸಿದವರಿಗೆ ಧನ್ಯವಾದಗಳನ್ನೂ ಅವರು ತಿಳಿಸಿದರು.

ತನ್ನ ಕುಟುಂಬಕ್ಕೆ ಭಾವನಾತ್ಮಕ ಬೆಂಬಲವನ್ನು ನೀಡಿದ್ದಕ್ಕಾಗಿ ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಮಲಯಾಳಂ ಸೂಪರ್‌ಸ್ಟಾರ್ ಮಮ್ಮೂಟಿಯವರನ್ನು ಉಲ್ಲೇಖಿಸಿದ ಮಲ್ಲಿಕಾ,‘‘ಅವರು ಪ್ರಸ್ತುತ ಮದ್ರಾಸ್‌ನಲ್ಲಿ ವಿಶ್ರಾಂತಿಯಲ್ಲಿದ್ದಾರೆ,ಆದರೂ ಪುರಸತ್ತು ಮಾಡಿಕೊಂಡು ಪತ್ರವನ್ನು ಬರೆದಿದ್ದಾರೆ. ‘ಪರವಾಗಿಲ್ಲ ಚೆಚಿ(ಅಕ್ಕಾ),ಎಲ್ಲವೂ ಸರಿಹೋಗುತ್ತದೆ’ ಎಂಬ ಅವರ ಸಂದೇಶ ನನ್ನ ಕಣ್ಣಿನಲ್ಲಿ ನೀರು ತರಿಸಿತ್ತು’’ ಎಂದು ಹೇಳಿದರು.

ಮುಮ್ಮಟ್ಟಿಯವರ ಸೌಜನ್ಯವನ್ನು ನೆನೆಸಿಕೊಂಡ ಮಲ್ಲಿಕಾ,‘ಮಮ್ಮುಟ್ಟಿ ಎತ್ತರದಲ್ಲಿದ್ದಾರೆ ಮತ್ತು ಸುಕುಮಾರನ್‌ರನ್ನು ಅವರೊಂದಿಗೆ ಹೋಲಿಸುವಂತೆಯೇ ಇಲ್ಲ. ಆದರೂ ನನ್ನ ಮಗನನ್ನು ಸಂಪರ್ಕಿಸಲು ಅವರು ಸಮಯ ಮಾಡಿಕೊಂಡಿದ್ದಾರೆ. ಅವರು ಅಂತಹ ಕಲಾವಿದ ’ ಎಂದು ಹೇಳಿದರು.

ʼಎಂಪುರಾನ್ʼ ಚಿತ್ರದ ಮೂಲ ವಿಷಯವು 2002ರ ಗುಜರಾತ್ ಗಲಭೆಯನ್ನು ಪರೋಕ್ಷವಾಗಿ ಉಲ್ಲೇಖಿಸಿದ್ದು,ಇದು ರಾಜಕೀಯ ವಿವಾದವನ್ನು ಸೃಷ್ಟಿಸಿದೆ. ಆದಾಯ ತೆರಿಗೆ ನೋಟಿಸ್ ಮತ್ತು ಈಡಿ ತನಿಖೆ ಈ ಹಿನ್ನೆಲೆಯಲ್ಲಿ ನಡೆದಿರುವ ಬೆಳವಣಿಗೆಗಳಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News