INDIA ಮೈತ್ರಿಕೂಟದ ಸ್ಥಿತಿಗತಿ ಬಗ್ಗೆ ಕಾಂಗ್ರೆಸ್ ಮಾತನಾಡಬೇಕು: ಉದ್ಧವ್ ನೇತೃತ್ವದ ಶಿವಸೇನೆ

ಉದ್ಧವ್ ಠಾಕ್ರೆ | PC : PTI
ಮುಂಬೈ: ಕಾಂಗ್ರೆಸ್ ಪಕ್ಷವು INDIA ಮೈತ್ರಿಕೂಟದ ಸ್ಥಿತಿಗತಿಯ ಬಗ್ಗೆ ಮಾತನಾಡಬೇಕು. ಇತ್ತೀಚೆಗೆ ಅಹಮದಾಬಾದ್‌ನಲ್ಲಿ ನಡೆದ ಪಕ್ಷದ ಸಭೆಯಲ್ಲಿ ವಿಪಕ್ಷಗಳ ಮೈತ್ರಿಕೂಟದ ಕುರಿತ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು ಎಂದು ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಆಗ್ರಹಿಸಿದೆ.
ಕಾಂಗ್ರೆಸ್ ಅಹಮದಾಬಾದ್ ಸಭೆಯಲ್ಲಿ ತನ್ನ ಪಕ್ಷದ ಬಗ್ಗೆ ಮಾತ್ರ ಮಾತನಾಡಿದೆ. INDIA ಮೈತ್ರಿಕೂಟದ ಬಗ್ಗೆ ಎಲ್ಲಿಯೂ ಚರ್ಚೆ ನಡೆಸಿಲ್ಲ ಎಂದು ಶಿವಸೇನೆ ಹೇಳಿದೆ.
ಲೋಕಸಭಾ ಚುನಾವಣೆಯ ನಂತರ INDIA ಬಣ ಎಲ್ಲಿದೆ ಎಂಬುದರ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಕಾಂಗ್ರೆಸ್ ತನ್ನ ಅಹಮದಾಬಾದ್ ಅಧಿವೇಶನದಲ್ಲಿ ಇದಕ್ಕೆ ಸ್ಪಷ್ಟವಾಗಿ ಉತ್ತರಿಸಬೇಕಿತ್ತು. ಮೈತ್ರಿಕೂಟ ಏನಾಯಿತು? ಅದು ನೆಲದಲ್ಲಿ ಹೂತುಹೋಗಿದೆಯೇ ಅಥವಾ ಗಾಳಿಯಲ್ಲಿ ಮಾಯವಾಗಿದೆಯೇ? ಈ ಪ್ರಶ್ನೆಗೆ ಉತ್ತರಿಸುವ ಜವಾಬ್ದಾರಿ ಕಾಂಗ್ರೆಸ್ ಅಧ್ಯಕ್ಷರ ಮೇಲಿದೆ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.
ಎಪ್ರಿಲ್ 8-9ರಂದು ಅಹಮದಾಬಾದ್‌ನಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬಿಹಾರ, ಗುಜರಾತ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನಿಲುವು ಏನು? ಪಕ್ಷವು ಮತ್ತೆ ಸೋಲನ್ನು ಸ್ವಾಗತಿಸುತ್ತಾ? ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪ್ರಯತ್ನಗಳನ್ನು ಮಾಡಬೇಕಾಗಿದೆ. ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಯಶಸ್ಸನ್ನು ಕಂಡರೂ, ವಿಧಾನಸಭಾ ಚುನಾವಣೆಯಲ್ಲಿ ಅದು ಅವಮಾನಕರ ಸೋಲನ್ನು ಅನುಭವಿಸಿತು ಎಂದು ಸಾಮ್ನಾದ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.
ಈ ಸೋಲಿಗೆ ಬಿಜೆಪಿಯ ಹಗರಣಗಳಷ್ಟೇ ಕಾಂಗ್ರೆಸ್‌ನ ಆಂತರಿಕ ಸಮಸ್ಯೆಗಳು ಕೂಡ ಕಾರಣ ಎಂಬ ಬಗ್ಗೆ ಚಿಂತಿಸಬೇಕಾಗಿದೆ. ಸರ್ವಾಧಿಕಾರದ ವಿರುದ್ಧ ಹೋರಾಡುವಲ್ಲಿ ಕಾಂಗ್ರೆಸ್ ಮುಂದಾಳತ್ವ ವಹಿಸಬೇಕಾಗಿದೆ. ದಿಲ್ಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್ ಸೋಲನ್ನು ಕಂಡಿದೆ. ರಾಷ್ಟ್ರ ರಾಜಧಾನಿಯಲ್ಲಿ ಪಕ್ಷಕ್ಕೆ ದಾರಿ ಸ್ಪಷ್ಟವಾಗಿದೆ ಎಂದು ಕೆಲವು ಕಾಂಗ್ರೆಸ್ ನಾಯಕರು ಭಾವಿಸಿದ್ದಾರೆ. INDIA ಮೈತ್ರಿಪಕ್ಷಗಳ ವಿರುದ್ಧ ಸ್ಪರ್ಧಿಸುವುದನ್ನು ಕಾಂಗ್ರೆಸ್ ಮುಂದುವರಿಸಿದರೆ ಅದರಿಂದ ಬಿಜೆಪಿಗೆ ಸಹಾಯವಾಗಲಿದೆ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.