ಇವಿಎಂ ಹ್ಯಾಕಿಂಗ್ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು: ರಣದೀಪ್ ಸುರ್ಜೇವಾಲ ಆಗ್ರಹ

Update: 2025-04-12 12:13 IST
ಇವಿಎಂ ಹ್ಯಾಕಿಂಗ್ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು: ರಣದೀಪ್ ಸುರ್ಜೇವಾಲ ಆಗ್ರಹ

ರಣದೀಪ್ ಸುರ್ಜೇವಾಲ (PTI)

  • whatsapp icon

ಹೊಸದಿಲ್ಲಿ: ಇವಿಎಂ ಹ್ಯಾಕಿಂಗ್ ಕುರಿತು ಅಮೆರಿಕದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ನೀಡಿರುವ ಹೇಳಿಕೆಯ ಕುರಿತು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಚುನಾವಣಾ ಆಯೋಗದ ಮೌನವನ್ನು ಪ್ರಶ್ನಿಸಿರುವ ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಂಡು, ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆದ ರಣದೀಪ್ ಸುರ್ಜೇವಾಲ, "ವಿದ್ಯುನ್ಮಾನ ಮತ ಯಂತ್ರಗಳ ಹ್ಯಾಕಿಂಗ್ ಹಾಗೂ ಅವುಗಳ ದೌರ್ಬಲ್ಯತೆ ಕುರಿತು ಗಬ್ಬಾರ್ಡ್ ಸಾರ್ವಜನಿಕವಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ. ವಾಸ್ತವವಾಗಿ, ಚಲಾವಣೆಗೊಂಡ ಮತಗಳ ಫಲಿತಾಂಶಗಳನ್ನು ತಿರುಚಲು ವಿದ್ಯುನ್ಮಾನ ಮತ ಯಂತ್ರಗಳನ್ನು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಪ್ರಶ್ನೆಯೆಂದರೆ, ಈ ಹೇಳಿಕೆ ಕುರಿತು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಭಾರತೀಯ ಚುನಾವಣಾ ಆಯೋಗವೇಕೆ ಮೌನವಾಗಿವೆ? ತುಳಸಿ ಗಬ್ಬಾರ್ಡ್ ನೀಡಿರುವ ಹೇಳಿಕೆಗೆ ಪ್ರತ್ಯುತ್ತರ ನೀಡಲು ಭಾರತೀಯ ಚುನಾವಣಾ ಆಯೋಗವೇಕೆ ಮೂಲಗಳ ಆಧಾರಿತ ಕತೆಗಳನ್ನು ಬಿತ್ತುತ್ತಿದೆ? ಪ್ರಧಾನಿ, ಎನ್‌ಡಿಎ ಸರಕಾರ ಹಾಗೂ ಬಿಜೆಪಿಯೇಕೆ ಈ ಕುರಿತು ಮೌನ ಧರಿಸಿವೆ?" ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಅಮೆರಿಕ ಸರಕಾರ ಹಾಗೂ ತುಳಸಿ ಗಬ್ಬಾರ್ಡ್ ಅವರಿಂದ ಇವಿಎಂ ಹ್ಯಾಕಿಂಗ್ ಹಾಗೂ ಇವಿಎಂನ ದೌರ್ಬಲ್ಯತೆ ಕುರಿತು ವಿವರಗಳನ್ನು ಸಂಗ್ರಹಿಸಲು ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರ ಅವರನ್ನು ಸಂಪರ್ಕಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

"ನಾವು ಮಾರ್ಚ್ 17ರಂದು, ಅರ್ಥಾತ್ ಕೇವಲ ಒಂದು ತಿಂಗಳ ಹಿಂದಷ್ಟೆ ಸನ್ಮಾನಿಸಿದ್ದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿ ಹಾಕುವುದು ಹಾಗೂ ನಿರಾಕರಿಸುವುದು ಸೂಕ್ತವೆ?" ಎಂದು ಅವರು ಪ್ರಶ್ನಿಸಿದ್ದಾರೆ.

"ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಹಾಗೂ ಪ್ರಜಾಪ್ರಭುತ್ವವು ಸಂವಿಧಾನದ ಮೂಲ ಸಂರಚನೆಯ ಭಾಗವಾಗಿರುವಾಗ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡು, ಈ ಕುರಿತು ಸೂಕ್ತ ತನಿಖೆ ನಡೆಸಬಾರದೇಕೆ?" ಎಂದೂ ಅವರು ಪ್ರಶ್ನಿಸಿದ್ದಾರೆ.

ಆದರೆ, ಭಾರತದ ವಿದ್ಯುನ್ಮಾನ ಯಂತ್ರಗಳು ಹ್ಯಾಕಿಂಗ್ ಮಾಡಬಹುದಾದ ಅಪಾಯವನ್ನು ಹೊಂದಿವೆ ಎಂಬ ತುಳಸಿ ಗಬ್ಬಾರ್ಡ್‌ರ ಹೇಳಿಕೆಯನ್ನು ಅಲ್ಲಗಳೆದಿರುವ ಚುನಾವಣಾ ಆಯೋಗ, ಇವಿಎಂಗಳು ಸರಳ ಕ್ಯಾಲ್ಕುಲೇಟರ್‌ನಂತೆ ಕೆಲಸ ಮಾಡುತ್ತದೆ ಹಾಗೂ ಅವುಗಳನ್ನು ಇಂಟರ್ನೆಟ್ ಅಥವಾ ಇನ್ಫ್ರಾರೆಡ್‌ಗೆ ಸಂಪರ್ಕಿಸಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮತಗಳನ್ನು ತಿರುಚಲು ಹ್ಯಾಕಿಂಗ್ ಮಾಡಬಹುದಾದ ದೌರ್ಬಲ್ಯವನ್ನು ಇವಿಎಂ ಒಳಗೊಂಡಿರುವುದಕ್ಕೆ ನಮ್ಮ ಕಚೇರಿ ಪುರಾವೆಗಳನ್ನು ಸಂಗ್ರಹಿಸಿದೆ ಎಂಬ ತುಳಸಿ ಗಬ್ಬಾರ್ಡ್‌ರ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಚುನಾವಣಾ ಅಯೋಗದ ಮೂಲಗಳು, "ಕೆಲವು ದೇಶಗಳು ವಿವಿಧ ವ್ಯವಸ್ಥೆಗಳು ಹಾಗೂ ಹಲವು ಖಾಸಗಿ ಜಾಲಗಳನ್ನು ಒಳಗೊಂಡಂತಹ ಯಂತ್ರಗಳು ಮತ್ತು ಪ್ರಕ್ರಿಯೆಗಳ ಮಿಶ್ರಣವನ್ನು ಹೊಂದಿವೆ" ಎಂದು ಸ್ಪಷ್ಟನೆ ನೀಡಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News