ಬಾಂಗ್ಲಾದೇಶದ ಜೊತೆಗಿನ ವ್ಯಾಪಾರ ಸೌಲಭ್ಯ ಒಪ್ಪಂದಕ್ಕೆ ನಿರ್ಬಂಧ : ಕೇಂದ್ರ ಸರಕಾರದ ಕ್ರಮವನ್ನು ಸಮರ್ಥಿಸಿಕೊಂಡ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ

ಹಿಮಂತ ಬಿಸ್ವ ಶರ್ಮ | PTI
ಗುವಾಹಟಿ: ವಿವಿಧ ದೇಶಗಳಿಗೆ ಸರಕುಗಳನ್ನು ರಫ್ತು ಮಾಡಲು ಬಾಂಗ್ಲಾದೇಶಕ್ಕೆ ನೀಡಲಾಗಿದ್ದ ಸರಕು ವರ್ಗಾವಣೆ ಸೌಲಭ್ಯದ ಅನುಮತಿಯನ್ನು ಹಿಂಪಡೆದಿರುವ ನಿರ್ಧಾರವು ಈಶಾನ್ಯ ರಾಜ್ಯಗಳ ಭದ್ರತೆಯನ್ನು ಕಾಪಾಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಆದ್ಯತೆಯನ್ನು ತೋರಿಸುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.
ಈ ನಿರ್ಧಾರವು ದೇಶದ ವ್ಯೂಹಾತ್ಮಕ ಹಾಗೂ ಆರ್ಥಿಕ ಆದ್ಯತೆಗಳನ್ನು ರಕ್ಷಿಸುವ ಕೇಂದ್ರ ಸರಕಾರದ ಬದ್ಧತೆಯನ್ನು ಪ್ರತಿಫಲಿಸುತ್ತಿದೆ ಎಂದೂ ಅವರು ಬಣ್ಣಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹಿಮಂತ ಬಿಸ್ವ ಶರ್ಮ, “ಬಾಂಗ್ಲಾದೇಶದ ಸರಕುಗಳ ರಫ್ತಿಗೆ ಒದಗಿಸಲಾಗಿದ್ದ ಸರಕು ವರ್ಗಾವಣೆ ಸೌಲಭ್ಯವನ್ನು ಹಿಂಪಡೆಯುವ ನಿರ್ಧಾರವು ರಾಷ್ಟ್ರೀಯ ಹಿತಾಸಕ್ತಿ ಹಾಗೂ ಈಶಾನ್ಯ ಪ್ರಾಂತ್ಯದ ಭದ್ರತೆಯನ್ನು ರಕ್ಷಿಸುವ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಅಚಲ ಬದ್ಧತೆಯನ್ನು ತೋರಿಸುತ್ತದೆ” ಎಂದು ಶ್ಲಾಘಿಸಿದ್ದಾರೆ.
“ಈ ನಿರ್ಣಾಯಕ ಕ್ರಮವು ಭಾರತದ ವ್ಯೂಹಾತ್ಮಕ ಹಾಗೂ ಆರ್ಥಿಕ ಆದ್ಯತೆಗಳನ್ನು ರಕ್ಷಿಸುವ ಕೇಂದ್ರ ಸರಕಾರದ ದೃಢ ನಿಲುವನ್ನು ಪ್ರತಿಫಲಿಸಿದೆ” ಎಂದೂ ಅವರು ಪ್ರಶಂಸಿಸಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳು, ಯೂರೋಪ್ ಹಾಗೂ ಇನ್ನಿತರ ವಿವಿಧ ದೇಶಗಳಿಗೆ ತನ್ನ ದೇಶದ ಬಂದರುಗಳು ಹಾಗೂ ವಿಮಾನ ನಿಲ್ದಾಣಗಳ ಮೂಲಕ ಸರಕುಗಳನ್ನು ರಫ್ತು ಮಾಡಲು ಬಾಂಗ್ಲಾದೇಶಕ್ಕೆ ನೀಡಲಾಗಿದ್ದ ಸರಕು ವರ್ಗಾವಣೆ ಸೌಲಭ್ಯವನ್ನು ಬುಧವಾರ ಭಾರತ ಹಿಂಪಡೆದಿತ್ತು.
ಭಾರತದ ಈಶಾನ್ಯ ರಾಜ್ಯಗಳು ಭೂಪ್ರದೇಶಗಳಿಂದ ಸುತ್ತುವರಿಯಲ್ಪಟ್ಟಿವೆ ಹಾಗೂ ನಾವು ಮಾತ್ರ ಸಾಗರದ ರಕ್ಷಕರಾಗಿದ್ದೇವೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರು ಚೀನಾದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಿಗೇ ಭಾರತದಿಂದ ಈ ನಿರ್ಧಾರ ಹೊರ ಬಿದ್ದಿತ್ತು.
ಇದಕ್ಕೂ ಮುನ್ನ, ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ರ ಹೇಳಿಕೆಯನ್ನು ಆಕ್ಷೇಪಾರ್ಹ ಹಾಗೂ ತೀವ್ರ ಖಂಡನೀಯ ಎಂದು ಟೀಕಿಸಿದ್ದ ಹಿಮಂತ ಬಿಸ್ವ ಶರ್ಮ, ಚಿಕನ್ ನೆಕ್ ಮಾರ್ಗವನ್ನು ತಪ್ಪಿಸಿ, ಈಶಾನ್ಯ ರಾಜ್ಯಗಳನ್ನು ಭಾರತದ ಇನ್ನಿತರ ಭಾಗಗಳೊಂದಿಗೆ ಸಂಪರ್ಕಿಸಲು ಪರ್ಯಾಯ ಮಾರ್ಗಗಳ ಹುಡುಕಾಟಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದ್ದರು.