ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ : ಸುಪ್ರೀಂ ಕೋರ್ಟ್ ಅಸಮಾಧಾನ

Update: 2025-04-07 18:54 IST
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ : ಸುಪ್ರೀಂ ಕೋರ್ಟ್ ಅಸಮಾಧಾನ

Photo | PTI

  • whatsapp icon

ಹೊಸದಿಲ್ಲಿ: ಸಿವಿಲ್ ಪ್ರಕರಣಗಳಲ್ಲಿ ರಾಜ್ಯ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳನ್ನು ಗಮನಿಸಿ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್, ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು, ಉತ್ತರ ಪ್ರದೇಶ ಪೊಲೀಸರು ಸಿವಿಲ್ ವಿವಾದಗಳನ್ನು ಕ್ರಿಮಿನಲ್ ಪ್ರಕರಣಗಳಾಗಿ ಪರಿವರ್ತಿಸುವ ಪುನರಾವರ್ತಿತ ನಿದರ್ಶನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಸಿವಿಲ್ ವಿವಾದದಲ್ಲಿ ಕ್ರಿಮಿನಲ್ ಕಾನೂನನ್ನು ಏಕೆ ಜಾರಿಗೆ ತರಲಾಗಿದೆ ಎಂದು ವಿವರಿಸಿ ಅಫಿಡವಿಟ್ ಸಲ್ಲಿಸುವಂತೆ ಪೊಲೀಸ್ ಮಹಾನಿರ್ದೇಶಕರು ಮತ್ತು ಗೌತಮ್ ಬುದ್ಧ ನಗರ ಜಿಲ್ಲಾ ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ಸೂಚಿಸಿದೆ.

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸಿವಿಲ್ ವಿಷಯವನ್ನು ಕ್ರಿಮಿನಲ್ ಪ್ರಕರಣವನ್ನಾಗಿ ಪರಿವರ್ತಿಸುವುದು ಸ್ವೀಕಾರಾರ್ಹವಲ್ಲ. ಇಂತಹ ಪದ್ಧತಿ ಮುಂದುವರಿದರೆ ಸರಕಾರದ ಮೇಲೆ ದಂಡ ವಿಧಿಸಬಹುದು ಎಂದು ಎಚ್ಚರಿಕೆಯನ್ನು ನೀಡಿದೆ.

ಸಿವಿಲ್ ವಿವಾದಗಳು ಇತ್ಯರ್ಥವಾಗಲು ಬಹಳ ಸಮಯ ತೆಗೆದುಕೊಳ್ಳುವುದರಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಿಚಾರಣೆಯ ವೇಳೆ ವಕೀಲರು ಹೇಳಿದರು. ಈ ವೇಳೆ ಉತ್ತರಪ್ರದೇಶದಲ್ಲಿ ಏನು ನಡೆಯುತ್ತಿದೆ. ಅದು ತಪ್ಪು, ಪ್ರತಿದಿನ ಸಿವಿಲ್ ಮೊಕದ್ದಮೆಗಳನ್ನು ಕ್ರಿಮಿನಲ್ ಮೊಕದ್ದಮೆಗಳಾಗಿ ಪರಿವರ್ತಿಸಲಾಗುತ್ತಿದೆ. ಇದು ಅಸಂಬದ್ಧವಾಗಿದೆ ಎಂದು ಸಿಜೆಐ ಹೇಳಿದರು.

ದೇಬು ಸಿಂಗ್ ಮತ್ತು ದೀಪಕ್ ಸಿಂಗ್ ಅವರು ವಕೀಲ ಚಂದ್ ಖುರೇಷಿ ಮೂಲಕ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.  

ನೋಯ್ಡಾ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ, ಅವರ ವಿರುದ್ಧದ ಚೆಕ್ ಬೌನ್ಸ್ ಪ್ರಕರಣ ಮುಂದುವರಿಯಲಿದೆ ಎಂದು ಹೇಳಿದೆ.


Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News