ಕಾಮ್ರಾರ ಮಧ್ಯಂತರ ಜಾಮೀನು ವಿಸ್ತರಿಸಿದ ಮದರಾಸು ಹೈಕೋರ್ಟ್

ಮದರಾಸು ಹೈಕೋರ್ಟ್ | PC : PTI
ಚೆನ್ನೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ ಶಿಂದೆಯ ವಿರುದ್ಧ ಮಾನಹಾನಿಕರ ಮಾತುಗಳನ್ನು ಆಡಿದ್ದಾರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಕಾಮಿಡಿಯನ್ ಕುನಾಲ್ ಕಾಮ್ರಾರಿಗೆ ನೀಡಲಾಗಿರುವ ಮಧ್ಯಂತರ ಜಾಮೀನಿನ ಅವಧಿಯಲ್ಲಿ ಮದರಾಸು ಹೈಕೋರ್ಟ್ ಸೋಮವಾರ ಎಪ್ರಿಲ್ 17ರವರೆಗೆ ವಿಸ್ತರಿಸಿದೆ.
ಮಹಾರಾಷ್ಟ್ರದಲ್ಲಿ ಕಾಮ್ರಾ ವಿರುದ್ಧ ಹೊಸದಾಗಿ ಮೂರು ಎಫ್‌ಐಆರ್‌ಗಳು ದಾಖಲಾಗಿವೆ ಎನ್ನುವುದನ್ನು ತಿಳಿಸಲು ಅವರ ವಕೀಲರು ಸೋಮವಾರ ನ್ಯಾಯಾಲಯದಲ್ಲಿ ಹಾಜರಾದರು. ಮಹಾರಾಷ್ಟ್ರದ ಅಧಿಕಾರಿಗಳು ಕುನಾಲ್ ಕಾಮ್ರಾ ಬಗ್ಗೆ ಅಸಹನೆ ತೋರ್ಪಡಿಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಆರೋಪಿಸಿದ ವಕೀಲರು, ಅವರ ವಯಸ್ಸಾದ ಹೆತ್ತವರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು.
ಮಾರ್ಚ್ 28ರಂದು, ನ್ಯಾಯಾಲಯವು ಕಾಮ್ರಾರಿಗೆ ಎಪ್ರಿಲ್ 7ರವರೆಗೆ ಮಧ್ಯಂತರ ಜಾಮೀನು ನೀಡಿತ್ತು.
ಇತ್ತೀಚೆಗೆ ಮುಂಬೈಯಲ್ಲಿ ಪ್ರದರ್ಶನವೊಂದನ್ನು ನೀಡಿರುವ ಕುನಾಲ್ ಕಾಮ್ರಾ, ವಿಡಂಬನಾತ್ಮಕ ಹಾಡೊಂದರಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ ಶಿಂದೆಯನ್ನು ಪರೋಕ್ಷವಾಗಿ ‘‘ದ್ರೋಹಿ’’ ಎಂಬುದಾಗಿ ಕರೆದಿದ್ದಾರೆ ಎಂಬುದಾಗಿ ಶಿವಸೇನೆ ಕಾರ್ಯಕರ್ತರು ಆರೋಪಿಸಿದ್ದಾರೆ. ಮೂರು ವರ್ಷಗಳ ಹಿಂದೆ ಶಿವಸೇನೆಯನ್ನು ಒಡೆಯುವಲ್ಲಿ ಶಿಂದೆ ವಹಿಸಿದ ಪಾತ್ರವನ್ನು ಕಾಮ್ರಾ ವ್ಯಂಗ್ಯವಾಡಿದ್ದಾರೆ ಎಂಬುದಾಗಿಯೂ ಕಾರ್ಯಕರ್ತರು ಹೇಳಿದ್ದಾರೆ.
ಬಳಿಕ ಶಿವಸೇನೆ ಕಾರ್ಯಕರ್ತರು ಆ ಕಾರ್ಯಕ್ರಮ ನಡೆದಿರುವ ಸ್ಟುಡಿಯೊ ಮತ್ತು ಆ ಸ್ಟುಡಿಯೊ ಇರುವ ಹೊಟೇಲ್ ನಲ್ಲಿ ದಾಂಧಲೆಗೈದಿದ್ದಾರೆ.
►ಎಫ್‌ಐಆರ್ ರದ್ದು ಕೋರಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ
ತನ್ನ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿರುವ ಮೊಕದ್ದಮೆಯನ್ನು ರದ್ದುಗೊಳಿಸಬೇಕೆಂದು ಕೋರಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಬಾಂಬೆ ಹೈಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಸಾರಂಗ್ ಕೊತ್ವಾಲ್ ನೇತೃತ್ವದ ವಿಭಾಗ ಪೀಠವೊಂದು ಅರ್ಜಿಯ ವಿಚಾರಣೆಯನ್ನು ಮಂಗಳವಾರ ಎತ್ತಿಕೊಳ್ಳಲಿದೆ.
ಮುಂಬೈ ಪೊಲೀಸರು ದಾಖಲಿಸಿರುವ ಮೊಕದ್ದಮೆಯು ಸಂವಿಧಾನವು ತನಗೆ ನೀಡಿರುವ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ನನ್ನ ಆಯ್ಕೆಯ ಕೆಲಸ ಮಾಡುವ ಹಕ್ಕು, ಜೀವಿಸುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬುದಾಗಿ ಅವರು ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.