ಜೈಲಿಗೆ ಹೋಗಲೂ ಸಿದ್ಧ: ಸಿಎಂ ಮಮತಾ ಬ್ಯಾನರ್ಜಿ

Update: 2025-04-07 20:27 IST
CM Mamata Banerjee

ಮಮತಾ ಬ್ಯಾನರ್ಜಿ | PC : PTI

  • whatsapp icon

ಕೋಲ್ಕತ: ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನಂತೆ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿರುವ ಸಾವಿರಾರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಭೇಟಿಯಾದರು.

ನೇಮಕಾತಿ ಪ್ರಕ್ರಿಯೆ ‘‘ಕಲುಷಿತಗೊಂಡಿದೆ’’ ಎಂಬುದಾಗಿ ಇತ್ತೀಚೆಗೆ ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, 25,753 ನೇಮಕಾತಿಗಳನ್ನು ರದ್ದುಗೊಳಿಸಿರುವುದನ್ನು ಸ್ಮರಿಸಬಹುದಾಗಿದೆ.

ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿರುವ ಸಾವಿರಾರು ಜನರು ಕೋಲ್ಕತದ ನೇತಾಜಿ ಒಳಾಂಗಣ ಸ್ಟೇಡಿಯಮ್‌ ನಲ್ಲಿ ಸೋಮವಾರ ಒಟ್ಟು ಸೇರಿದರು. ಅವರನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೆಲಸಗಳನ್ನು ಕಳೆದುಕೊಂಡಿರುವವರ ಪರವಾಗಿ ನಿಲ್ಲುವುದಾಗಿ ಘೋಷಿಸಿದರು. ‘‘ಬಂಗಾಳದ ಶಾಲೆಗಳಲ್ಲಿ ಕೆಲಸಗಳನ್ನು ಕಳೆದುಕೊಂಡಿರುವವರ ಪರವಾಗಿ ನಾನಿದ್ದೇನೆ. ಅವರ ಘನತೆಯನ್ನು ಮರಳಿ ಪಡೆಯುವುದಕ್ಕಾಗಿ ನಾನು ಎಲ್ಲವನ್ನೂ ಮಾಡುತ್ತೇನೆ’’ ಎಂದು ಅವರು ಘೋಷಿಸಿದರು.

ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮಮತಾ ಹೇಳಿದರು. ‘‘ಆದರೆ, ಈ ವಿಷಯವನ್ನು ಸೂಕ್ಷ್ಮ ಮತ್ತು ನ್ಯಾಯೋಚಿತವಾಗಿ ನಿಭಾಯಿಸಲು ಸಾಧ್ಯವಾಗುವಂತೆ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’’ ಎಂದು ಅವರು ನುಡಿದರು.

‘‘ಅರ್ಹ ಅಭ್ಯರ್ಥಿಗಳು ಶಾಲೆಯ ಉದ್ಯೋಗಗಳನ್ನು ಕಳೆದುಕೊಳ್ಳಲು ನಾನು ಬಿಡುವುದಿಲ್ಲ. ಕೆಲಸ ಕಳೆದುಕೊಂಡವರ ಪರವಾಗಿ ನಿಂತಿರುವುದಕ್ಕಾಗಿ ನನ್ನನ್ನು ಯಾರಾದರೂ ಶಿಕ್ಷಿಸಲು ಬಯಸಿದರೆ ಜೈಲಿಗೆ ಹೋಗಲೂ ಸಿದ್ಧವಾಗಿದ್ದೇನೆ’’ ಎಂದು ಅವರು ಹೇಳಿದರು.

ನನಗೆ ಗೊತ್ತೇ ಇಲ್ಲದ ವಿಷಯದಲ್ಲಿ ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಆರೋಪಿಸಿದರು.

‘‘ಅರ್ಹ ಅಭ್ಯರ್ಥಿಗಳು ಕೆಲಸ ಕಳೆದುಕೊಳ್ಳುವುದನ್ನು ಅಥವಾ ಸೇವೆಯಲ್ಲಿ ತಡೆ ಉಂಟಾಗುವುದನ್ನು ತಪ್ಪಿಸಲು ನಮ್ಮಲ್ಲಿ ಬೇರೆ ಯೋಜನೆಗಳಿವೆ’’ ಎಂದು ಅವರು ಹೇಳಿದರು.

ಇಡೀ ನೇಮಕಾತಿ ಪ್ರಕ್ರಿಯೆ ‘‘ಕಲುಷಿತಗೊಂಡಿದೆ ಮತ್ತು ದೋಷಪೂರಿವಾಗಿದೆ’’ ಎಂದು ಎಪ್ರಿಲ್ 3ರಂದು ಘೋಷಿಸಿದ ಸುಪ್ರೀಂ ಕೋರ್ಟ್, ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮಾಡಲಾಗಿರುವ 25,753 ನೇಮಕಾತಿಗಳನ್ನು ಅಸಿಂಧುಗೊಳಿಸಿತ್ತು.

ಮಮತಾ ಬ್ಯಾನರ್ಜಿಯ ಸೋದರಳಿಯ ಅಭ್ಯರ್ಥಿಗಳಿಂದ 700 ಕೋಟಿ ರೂ. ಲಂಚ ಪಡೆದಿದ್ದಾರೆ ಎಂಬುದಾಗಿ ಬಿಜೆಪಿ ನಾಯಕ ಹಾಗೂ ರಾಜ್ಯದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News