ಶ್ರೀಲಂಕಾ ಭೇಟಿ ಸಂದರ್ಭ ಪ್ರಧಾನಿ ತಮಿಳುನಾಡಿನ ಬೇಡಿಕೆಯನ್ನು ನಿರ್ಲಕ್ಷಿಸಿದ್ದಾರೆ: ಮುಖ್ಯಮಂತ್ರಿ ಸ್ಟಾಲಿನ್

ನರೇಂದ್ರ ಮೋದಿ , ಎಂ.ಕೆ. ಸ್ಟಾಲಿನ್ | PC : PTI
ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಶ್ರೀಲಂಕಾಕ್ಕೆ ಭೇಟಿ ನೀಡಿದ ಸಂದರ್ಭ ಮೀನುಗಾರರ ಸುರಕ್ಷೆ ಸೇರಿದಂತೆ ತಮಿಳುನಾಡಿನ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.
ಮೀನುಗಾರರ ಹಿತಾಸಕ್ತಿಗಳನ್ನು ರಕ್ಷಿಸಲು ಕೇಂದ್ರ ಸರಕಾರ ಯಾವಾಗಲೂ ಅವರ ಪರವಾಗಿ ದೃಢವಾಗಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ ಒಂದು ದಿನದ ಬಳಿಕ ಎಂ.ಕೆ. ಸ್ಟಾಲಿನ್ ಅವರು ಈ ಹೇಳಿಕೆ ನೀಡಿದ್ದಾರೆ.
ತಮಿಳುನಾಡು ವಿಧಾನ ಸಭೆಯಲ್ಲಿ ಸೋಮವಾರ ಮಾತನಾಡಿದ ಸ್ಟಾಲಿನ್, ಕಚ್ಚೆತ್ತೀವು ದ್ವೀಪವನ್ನು ಹಿಂಪಡೆಯುವಂತೆ ಹಾಗೂ ಈ ವಿಷಯದ ಕುರಿತಂತೆ ಶ್ರೀಲಂಕಾ ಸರಕಾರದೊಂದಿಗೆ ಚರ್ಚೆ ನಡೆಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದರು.
ತಮಿಳುನಾಡು ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ನಿರಂತರ ಬಂಧಿಸುತ್ತಿರುವುದನ್ನು ನಿಲ್ಲಿಸುವಂತೆ ನಾವು ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದ್ದೇವೆ. ಈ ನಿರ್ಣಯದಲ್ಲಿ ಕಚ್ಚತ್ತೀವು ದ್ವೀಪವನ್ನು ಹಿಂಪಡೆಯುವಂತೆ, ಶ್ರೀಲಂಕಾ ಕಾರಾಗೃಹದಲ್ಲಿರುವ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಹಾಗೂ ಶ್ರೀಲಂಕಾ ನೌಕಾ ಪಡೆ ವಶಪಡಿಸಿಕೊಂಡಿರುವ ದೋಣಿಗಳನ್ನು ಹಿಂದಿರುಗಿಸುವಂತೆ ನಾವು ಮನವಿ ಮಾಡಿದ್ದೇವೆ ಎಂದು ಸ್ಟಾಲಿನ್ ಹೇಳಿದರು.
ಶ್ರೀಲಂಕಾಕ್ಕೆ ಭೇಟಿ ನೀಡುವ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಸರಕಾರದೊಂದಿಗೆ ಮಾತುಕತೆ ನಡೆಸುವ ಮೂಲಕ ಕ್ರಮ ತೆಗೆದುಕೊಳ್ಳಬೇಕೆಂದು ನಾವು ನಿರ್ಣಯದಲ್ಲಿ ಉಲ್ಲೇಖಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಮೋದಿ ಅವರು ಇತ್ತೀಚೆಗೆ ಶ್ರೀಲಂಕಾಕ್ಕೆ ಭೇಟಿ ನೀಡಿದ ಸಂದರ್ಭ ಕಚ್ಚತ್ತೀವು ವಿವಾದದ ಕುರಿತು ಮಾತುಕತೆ ನಡೆಸಿಲ್ಲ ಹಾಗೂ ರಾಜ್ಯದ ಬೇಡಿಕೆಯನ್ನು ನಿರ್ಲಕ್ಷಿಸಿದಂತೆ ಕಾಣುತ್ತದೆ. ಕಚ್ಚತ್ತೀವು ದ್ವೀಪವನ್ನು ಹಿಂಪಡೆಯಬೇಕೆಂಬ ತಮಿಳುನಾಡಿನ ಬೇಡಿಕೆಯನ್ನು ನಿರ್ಲಕ್ಷಿಸಲಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಶ್ರೀಲಂಕಾಕ್ಕೆ ತೆರಳಿದ ಹಾಗೂ ಮೀನುಗಾರರ ಬಿಡುಗಡೆ ಕುರಿತು ಧ್ವನಿ ಎತ್ತಿದ ಮೋದಿ ಅವರು ಈ ವಿಷಯದ ಕುರಿತು ಧ್ವನಿ ಎತ್ತಿರುವುದು ಕಂಡು ಬಂದಿಲ್ಲ. ಇದು ವಿಷಾದಕರ ಹಾಗೂ ನಿರಾಶಾದಾಯಕ ಎಂದು ಅವರು ಹೇಳಿದರು.
ಕಚ್ಚತ್ತೀವು ದ್ವೀಪವನ್ನು ಶ್ರೀಲಂಕಾದಿಂದ ಹಿಂಪಡೆಯಬೇಕು ಹಾಗೂ ಶ್ರೀಲಂಕಾ ನೌಕಾ ಪಡೆ ತಮಿಳುನಾಡಿನ ಮೀನುಗಾರರನ್ನು ಬಂಧಿಸುತ್ತಿರುವುದಕ್ಕೆ ಸಂಬಂಧಿಸಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಕುರಿತು ತಮಿಳುನಾಡು ವಿಧಾನ ಸಭೆ ಬುಧವಾರ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾಕ್ಕೆ ಭೇಟಿ ನೀಡುವುದಕ್ಕಿಂತ ಮುನ್ನ ಸ್ಟಾಲಿನ್ ಅವರು ಪತ್ರ ಬರೆದಿದ್ದರು ಹಾಗೂ ಈ ವಿಷಯದ ಕುರಿತು ಶ್ರೀಲಂಕಾ ಸರಕಾರದೊಂದಿಗೆ ಚರ್ಚಿಸುವಂತೆ ಅವರನ್ನು ಆಗ್ರಹಿಸಿದ್ದರು.