ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು? ; ಸಂಘಟಕರಿಂದ ಆರೋಪ: ಊಹಾಪೋಹ ಎಂದ ಪೊಲೀಸರು

Update: 2025-04-07 20:31 IST
ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು? ; ಸಂಘಟಕರಿಂದ ಆರೋಪ: ಊಹಾಪೋಹ ಎಂದ ಪೊಲೀಸರು

ಸಾಂದರ್ಭಿಕ ಚಿತ್ರ | PTI

  • whatsapp icon

ಕಾನ್ಪುರ: ರಾಮ ನವಮಿ ಮೆರವಣಿಗೆಯ ಮೇಲೆ ಕಲ್ಲುಗಳನ್ನು ಎಸೆಯಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಕಾನ್ಪುರದ ನಯೀ ಸಡಕ್ ಪ್ರದೇಶದಲ್ಲಿ ರವಿವಾರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಆದರೆ, ಕಲ್ಲೆಸೆತದ ಆರೋಪಗಳನ್ನು ಊಹಾಪೋಹ ಎಂಬುದಾಗಿ ತಳ್ಳಿಹಾಕಿರುವ ಪೊಲೀಸರು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

ಮೆರವಣಿಗೆಯು ಹಿಂದಿರುಗುತ್ತಿದ್ದಾಗ ಚಂದ್ರೇಶ್ವರ್ ಹಟದ ಸಮೀಪದ ನಯೀ ಸಡಕ್‌ನಲ್ಲಿ ಕಟ್ಟಡಗಳ ತುದಿಯಿಂದ ಕಲ್ಲುಗಳನ್ನು ಎಸೆಯಲಾಗಿದೆ ಎಂಬುದಾಗಿ ಆರೋಪಿಸಿ ಶೋಭಾ ಯಾತ್ರೆಯ ಸಂಘಟಕರು ರವಿವಾರ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ಉಪ ಪೊಲೀಸ್ ಕಮಿಶನರ್ (ಪೂರ್ವ) ಶ್ರವಣ್ ಕುಮಾರ್ ಸಿಂಗ್ ತಿಳಿಸಿದರು.

ಈ ಪ್ರದೇಶದಿಂದ ಕೆಲವರು ಓಡುತ್ತಿರುವುದನ್ನು ತೋರಿಸುವ ವೀಡಿಯೊದಿಂದಾಗಿ ಈ ಊಹಾಪೋಹಗಳು ಹುಟ್ಟಿಕೊಂಡಿವೆ ಎಂದು ಅವರು ಹೇಳಿದರು.

‘‘ಮೆರವಣಿಗೆಯು ಹಿಂದಿರುಗುತ್ತಿದ್ದಾಗ ಕಟ್ಟಡಗಳ ತುದಿಯಿಂದ ಭಕ್ತರ ಮೇಲೆ ಕಲ್ಲೆಸೆತ ನಡೆಯಿತು. ಆಗ ಗದ್ದಲ ಆರಂಭವಾಯಿತು ಎಂಬುದಾಗಿ ದೂರಿನಲ್ಲಿ ಆರೋಪಿಸಲಾಗಿದೆ’’ ಎಂದು ಪೊಲೀಸರು ತಿಳಿಸಿದರು.

‘‘ಆದರೆ, ಇದು ಊಹಾಪೋಹ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಯಾರ ಮೇಲೂ ಕಲ್ಲುಗಳು ಬಿದ್ದಿಲ್ಲ’’ ಎಂದು ಅವರು ನುಡಿದರು. ‘‘ನಾವು ಸರಿಯಾದ ಪರಿಶೀಲನೆ ನಡೆಸಿದ್ದೇವೆ. ಸಿಸಿಟಿವಿ ವೀಡಿಯೊಗಳು ಮತ್ತು ಇತರ ವೀಡಿಯೊಗಳನ್ನು ನೋಡಿದ್ದೇವೆ. ಆದರೆ, ಆರೋಪವನ್ನು ಸಾಬೀತುಪಡಿಸುವ ಪುರಾವೆಗಳು ಈವರೆಗೆ ಪತ್ತೆಯಾಗಿಲ್ಲ’’ ಎಂದರು.

ಆರೋಪಗಳನ್ನು ದೃಢೀಕರಿಸುವ ಮತ್ತು ತನಿಖೆಗೆ ನೆರವು ನೀಡುವ ವೀಡಿಯೊ ಅಥವಾ ಚಿತ್ರಗಳಿದ್ದರೆ ಸಲ್ಲಿಸುವಂತೆ ಪೊಲೀಸರು ಸಾರ್ವಜನಿಕರು ಮತ್ತು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News