ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ: ನಿರ್ಣಯ ಅಂಗೀಕರಿಸಿದ ಲೋಕಸಭೆ

Update: 2025-04-03 21:39 IST
ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ: ನಿರ್ಣಯ ಅಂಗೀಕರಿಸಿದ ಲೋಕಸಭೆ

Photo : PTI

  • whatsapp icon

ಹೊಸದಿಲ್ಲಿ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವ ಶಾಸನಬದ್ಧ ನಿರ್ಣಯವನ್ನು ಲೋಕಸಭೆಯಲ್ಲಿ ಗುರುವಾರ ಬೆಳಗ್ಗೆ ಅಂಗೀಕರಿಸಲಾಯಿತು. ಎಲ್ಲಾ ಸಂಸದರು ಪಕ್ಷಾತೀತರಾಗಿ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿದರು. ಆದರೆ, ಮಣಿಪುರದಲ್ಲಿನ ಪರಿಸ್ಥಿತಿಗಾಗಿ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಸಂಕ್ಷಿಪ್ತ ಚರ್ಚೆಯ ಬಳಿಕ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಣಿಪುರದಲ್ಲಿ ಸಹಜ ಸ್ಥಿತಿಯನ್ನು ಮರು ಸ್ಥಾಪಿಸಲು ಸರಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ಕಳೆದ ನಾಲ್ಕು ತಿಂಗಳಿಂದ ಮಣಿಪುರದಲ್ಲಿ ಯಾವುದೇ ಹಿಂಸಾಚಾರ ನಡೆದಿಲ್ಲ. ಶಾಂತಿಯುತ ಪರಿಹಾರಕ್ಕಾಗಿ ಮೈತೈ ಹಾಗೂ ಕುಕಿ ಸಮುದಾಯಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಅವರು ಲೋಕಸಭೆಗೆ ತಿಳಿಸಿದರು.

‘‘ಮಣಿಪುರದಲ್ಲಿ ಪರಿಸ್ಥಿತಿ ಶಾಂತಿಯುತವಾಗಿದೆ. ಜನರು ಶಿಬಿರಗಳಲ್ಲಿ ಇರುವಷ್ಟು ಕಾಲ, ಪರಿಸ್ಥಿತಿ ತೃಪ್ತಿಕರವಾಗಿದೆ ಎಂದು ನಾನು ಹೇಳಲಾರೆ. ಮಣಿಪುರದಲ್ಲಿ ಶಾಂತಿ ಮರು ಸ್ಥಾಪಿಸಲು ಸರಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’’ ಎಂದು ಅವರು ಹೇಳಿದರು.

ರಾಜ್ಯ ಉಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿದೆ. ನ್ಯಾಯಾಲಯದಿಂದ ಆದೇಶ ಹೊರಬಿದ್ದ ದಿನ ನಾವು ವಿಮಾನದ ಮೂಲಕ ಕೇಂದ್ರದ ಪಡೆಗಳನ್ನು ಕಳುಹಿಸಿದ್ದೇವೆ. ಕ್ರಮ ತೆಗೆದುಕೊಳ್ಳುವಲ್ಲಿ ನಮ್ಮಿಂದ ಯಾವುದೇ ವಿಳಂಬ ಆಗಿಲ್ಲ ಎಂದು ಅವರು ಹೇಳಿದರು.

2023 ಮೇಯಲ್ಲಿ ಆರಂಭವಾದ ಹಿಂಸಾಚಾರದಲ್ಲಿ ಇದುವರೆಗೆ 260 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಶೇ. 80 ಜನರು ಹಿಂಸಾಚಾರ ಆರಂಭವಾದ ಮೊದಲ ತಿಂಗಳಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಹಿಂದಿನ ಸರಕಾರಗಳ ಅಧಿಕಾರಾವಧಿಯಲ್ಲಿ ನಡೆದ ಹಿಂಸಾಚಾರವನ್ನು ಹೋಲಿಸಲು ಬಯಸುವುದಿಲ್ಲ. ಆದರೆ, 1990ರ ದಶಕದಲ್ಲಿ 5 ವರ್ಷಗಳ ಅವಧಿಯಲ್ಲಿ ನಾಗಾ ಹಾಗೂ ಕುಕಿ ಸಮುದಾಯಗಳ ನಡುವೆ ನಡೆದ ಘರ್ಷಣೆ ಕುರಿತು ಸದನಕ್ಕೆ ತಿಳಿಸಲು ಬಯಸುತ್ತೇನೆ ಎಂದು ಅಮಿತ್ ಶಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News