ಬೇಡಿಕೆ ಈಡೇರುವ ವರೆಗೆ ಪ್ರತಿಭಟನೆ ಮುಂದುವರಿಯಲಿದೆ: ರೈತ ನಾಯಕ ದಲ್ಲೇವಾಲ್

ಜಗಜೀತ್ ಸಿಂಗ್ ದಲ್ಲೇವಾಲ್ | PC : PTI
ಹೊಸದಿಲ್ಲಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಸರಕಾರ ಈಡೇರಿಸುವ ವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್ ಅವರು ಸೋಮವಾರ ಹೇಳಿದ್ದಾರೆ.
ನಮ್ಮ ಮುಂದಿನ ನಡೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ ಸಂಸ್ಥೆ) ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ)ದ ಸಭೆಯಲ್ಲಿ ನಿರ್ಧರಿಸಲಿದ್ದೇವೆ ಎಂದು ದಲ್ಲೇವಾಲ್ ತಿಳಿಸಿದ್ದಾರೆ.
ಖನ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರತಿಭಟನೆಯ ಭಾಗವಾಗಿ ಪಂಜಾಬ್‌ನ ಹಲವು ಭಾಗಗಳಲ್ಲಿ ‘ಕಿಸಾನ್ ಪಂಚಾಯತ್’ ನಡೆಸಲಾಗಿತ್ತು. ಮುಂದಿನ ದಿನಗಳಲ್ಲಿ ನಾವು ಎರಡೂ ವೇದಿಕೆಗಳ ಸಭೆ ನಡೆಸಲಿದ್ದೇವೆ ಹಾಗೂ ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧರಿಸಲಿದ್ದೇವೆ ಎಂದರು.
ರೈತರು ಹಾಗೂ ಕೇಂದ್ರ ಸರಕಾರದ ಪ್ರತಿನಿಧಿಗಳ ನಡುವೆ ಮೇ 4ರಂದು ನಡೆಯಲಿರುವ ಪ್ರಸ್ತಾವಿತ ಸಭೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸಭೆಯಲ್ಲಿ ರೈತ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.
ರೈತರು ಸಭೆಗೆ ಹಾಜರಾಗಿಲ್ಲ ಎಂದು ಹೇಳಲು ನಾವು ಸರಕಾರಕ್ಕೆ ಅವಕಾಶ ನೀಡಲು ಬಯಸುವುದಿಲ್ಲ. ನಾವು ಸಭೆಗೆ ಹಾಜರಾಗಲಿದ್ದೇವೆ ಹಾಗೂ ನಮ್ಮ ಬೇಡಿಕೆಗಳನ್ನು ಸರಕಾರದ ಮುಂದಿರಿಸಲಿದ್ದೇವೆ ಎಂದು ಅವರು ತಿಳಿಸಿದರು.
ಇನ್ನೋರ್ವ ರೈತ ನಾಯಕ ಅಭಿಮನ್ಯು ಕೊಹಾರ್, ನಮ್ಮ ಬೇಡಿಕೆಗಳು ಈಡೇರುವ ವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು. ಪಂಜಾಬ್ ಹಾಗೂ ರಾಜಸ್ಥಾನದಲ್ಲಿ ಕೂಡ ‘ಕಿಸಾನ್ ಮಹಾಪಂಚಾಯತ್’ ನಡೆಸಲಾಗುವುದು ಎಂದು ಅವರು ತಿಳಿಸಿದರು.