ಟ್ರಂಪ್ ಸುಂಕದ ಪರಿಣಾಮ | ಭಾರತೀಯ ಶೇರು ಮಾರುಕಟ್ಟೆಯಲ್ಲಿ ರಕ್ತಪಾತ: ಹೂಡಿಕೆದಾರರಿಗೆ 13 ಲಕ್ಷ ಕೋಟಿ ರೂ.ನಷ್ಟ

Update: 2025-04-07 21:43 IST
ಟ್ರಂಪ್ ಸುಂಕದ ಪರಿಣಾಮ | ಭಾರತೀಯ ಶೇರು ಮಾರುಕಟ್ಟೆಯಲ್ಲಿ ರಕ್ತಪಾತ: ಹೂಡಿಕೆದಾರರಿಗೆ 13 ಲಕ್ಷ ಕೋಟಿ ರೂ.ನಷ್ಟ

PC: PTI 

  • whatsapp icon

ಹೊಸದಿಲ್ಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಮದು ಸರಕುಗಳ ಮೇಲೆ ಸುಂಕ ಬ್ರಹ್ಮಾಸ್ತ್ರವನ್ನು ಬಿಟ್ಟೂಬಿಡದೆ ಪ್ರಯೋಗಿಸುತ್ತಿದ್ದು, ಹೆಚ್ಚುತ್ತಿರುವ ವ್ಯಾಪಾರ ಸಮರದ ಕಳವಳಗಳು ವಿಶ್ವಾದ್ಯಂತ ಶೇರು ಮಾರುಕಟ್ಟೆಗಳನ್ನು ತಲ್ಲಣಗೊಳಿಸಿವೆ.

ಟ್ರಂಪ್‌ ರ ಸ್ವಂತ ಅಮೆರಿಕದಲ್ಲಿಯೂ ಶೇರು ಮಾರುಕಟ್ಟೆಗಳು ನೆಲ ಕಚ್ಚಿದ್ದು,ಭಾರತದ ಶೇರು ಮಾರುಕಟ್ಟೆಗಳೂ ಹೂಡಿಕೆದಾರರನ್ನು ಕಂಗಾಲಾಗಿಸುವಲ್ಲಿ ಹಿಂದೆ ಬಿದ್ದಿಲ್ಲ. ಸೋಮವಾರ ಬೆಳಿಗ್ಗೆ ವಹಿವಾಟು ಆರಂಭಗೊಂಡ ಬೆನ್ನಲ್ಲೇ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ50 ಭಾರೀ ಕುಸಿತವನ್ನು ಕಂಡಿದ್ದವು.

ಸೆನ್ಸೆಕ್ಸ್ 3,939.68 ಅಂಶಗಳಷ್ಟು ಅಥವಾ ಶೇ.5.22ರಷ್ಟು ಕುಸಿದಿದ್ದು, ಕ್ಷಣ ಮಾತ್ರದಲ್ಲಿ ಹೂಡಿಕೆದಾರರ 20.16 ಲಕ್ಷ ಕೋಟಿ ರೂ.ಗಳ ಸಂಪತ್ತು ಕರಗಿತ್ತು. ಕೊನೆಗೂ ತುಸು ಚೇತರಿಸಿಕೊಂಡ ನಿಫ್ಟಿ50 742.85(ಶೇ.3.24) ಅಂಶಗಳ ನಷ್ಟದೊಂದಿಗೆ 22,161.60ರಲ್ಲಿ ಮತ್ತು ಸೆನ್ಸೆಕ್ಸ್ 2226.79 ಅಂಶಗಳ(ಶೇ.2.95) ನಷ್ಟದೊಂದಿಗೆ 73,137.90ರಲ್ಲಿ ದಿನದಾಟವನ್ನು ಮುಕ್ತಾಯಗೊಳಿಸಿವೆ. ದಿನವಿಡೀ ಟ್ರಂಪ್ ಸುಂಕದ ಹುಚ್ಚಾಟದಿಂದ ಕಂಗಾಲಾಗಿದ್ದ ಹೂಡಿಕೆದಾರರ ನಷ್ಟದ ಪ್ರಮಾಣ ದಿನದಂತ್ಯಕ್ಕೆ ಇಳಿಕೆಯಾಗಿದ್ದು,ಒಟ್ಟು 13 ಲಕ್ಷ ಕೋಟಿ ರೂ.ಗಳ ಸಂಪತ್ತು ಕರಗಿದೆ.

ಬೆಳಗಿನ ವಹಿವಾಟಿನಲ್ಲಿ ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ 20,16,293.53 ಕೋ.ರೂ.ಗಳಷ್ಟು ಕುಸಿದು 3,83,18,592,93 ಕೋ.ರೂ.(4.5 ಲಕ್ಷ ಕೋಟಿ ಡಾಲರ್)ಗೆ ತಲುಪಿತ್ತು.

ಸೆನ್ಸೆಕ್ಸ್‌ನ ಭಾಗವಾಗಿರುವ ಎಲ್ಲ ಕಂಪನಿಗಳು ನಷ್ಟ ಅನುಭವಿಸಿದ್ದು,ಟಾಟಾ ಮೋಟರ್ಸ್ ಮತ್ತು ಟಾಟಾ ಸ್ಟೀಲ್ ಶೇ.10ಕ್ಕೂ ಅಧಿಕ ಕುಸಿತವನ್ನು ದಾಖಲಿಸಿ ನಂತರದ ವಹಿವಾಟಿನಲ್ಲಿ ತುಸು ಚೇತರಿಸಿಕೊಂಡಿವೆ. ಟ್ರೆಂಟ್ ಶೇ.14.77 ಕುಸಿತ ದಾಖಲಿಸಿದೆ.

ಏಶ್ಯದ ಶೇರು ಮಾರುಕಟ್ಟೆಗಳ ಪೈಕಿ ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಶೇ.15.24,ಟೋಕಿಯೊದ ನಿಕ್ಕಿ ಶೇ.8.49,ಶಾಂಘೈ ಕಂಪೋಸಿಟ್ ಶೇ.7.93 ಮತ್ತು ದಕ್ಷಿಣ ಕೊರಿಯಾದ ಕೊಸ್ಪಿ ಶೇ.5.89ರಷ್ಟು ಕುಸಿತ ದಾಖಲಿಸಿವೆ.

ಶುಕ್ರವಾರ ಶೇ.5ಕ್ಕೂ ಅಧಿಕ ಕುಸಿದಿದ್ದ ಅಮೆರಿಕದ ಶೇರುಪೇಟೆಗಳು ಸೋಮವಾರವೂ ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದು,ಭಾರತೀಯ ಕಾಲಮಾನ ರಾತ್ರಿ ಒಂಭತ್ತು ಗಂಟೆಯ ಸುಮಾರಿಗೆ ಡೋ ಜೋನ್ಸ್ ಶೇ.2.61,ಎಸ್‌ಆ್ಯಂಡ್‌ಪಿ ಶೇ.2.2 ಮತ್ತು ನಾಸ್ಡಾಕ್ ಶೇ.1.71ರಷ್ಟು ನಷ್ಟದಲ್ಲಿದ್ದವು.

ಜಾಗತಿಕ ಮಾರುಕಟ್ಟೆಗಳು ತೀವ್ರ ಅನಿಶ್ಚಿತತೆಯಿಂದ ಉಂಟಾಗಿರುವ ಏರಿಳಿತಗಳ ಮೂಲಕ ಸಾಗುತ್ತಿವೆ. ಟ್ರಂಪ್ ಘೋಷಿಸುತ್ತಿರುವ ಸುಂಕಗಳಿಂದ ಉಂಟಾಗಿರುವ ಈ ಪ್ರಕುಬ್ಧತೆ ಜಾಗತಿಕ ಮಾರುಕಟ್ಟೆಯನ್ನು ಎಲ್ಲಿಗೆ ಒಯ್ಯಲಿದೆ ಎಂಬ ಬಗ್ಗೆ ಯಾರಿಗೂ ಸುಳಿವು ಇಲ್ಲ. ಮಾರುಕಟ್ಟೆಯ ಈ ಪ್ರಕ್ಷುಬ್ಧ ಹಂತದಲ್ಲಿ ಕಾದು ನೋಡುವುದು ಅತ್ಯುತ್ತಮ ಕಾರ್ಯತಂತ್ರವಾಗಿದೆ ಎಂದು ಜಿಯೋಜಿತ್ ಫೈನಾನ್ಸಿಯಲ್ ಸರ್ವಿಸಸ್ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ.ವಿಜಯಕುಮಾರ ಅಭಿಪ್ರಾಯಿಸಿದ್ದಾರೆ.

ಈ ನಡುವೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.2.76ರಷ್ಟು ಕುಸಿದು ಬ್ಯಾರೆಲ್‌ಗೆ 63.77 ಡಾ.ಗೆ ತಲುಪಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News