ಅಮೆರಿಕಕ್ಕೆ ರಫ್ತು ಶೇ. 6.41 ಇಳಿಕೆ ಸಾಧ್ಯತೆ: ವರದಿ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ : ಅಮೆರಿಕ ವಿವಿಧ ಸರಕುಗಳ ಮೇಲಿನ ಸುಂಕವನ್ನು ಏರಿಕೆ ಮಾಡಿರುವುದರಿಂದ ಈ ವರ್ಷ ಭಾರತ ಅಮೆರಿಕಕ್ಕೆ ಮಾಡುವ ರಫ್ತು 5.76 ಬಿಲಿಯನ್ ಡಾಲರ್ (ಶೇ. 6.41) ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್ ವರದಿ ಮಾಡಿದೆ.
ವರದಿಯ ಪ್ರಕಾರ, ಸಮುದ್ರ ಉತ್ಪನ್ನಗಳು, ಚಿನ್ನ, ಇಲೆಕ್ಟ್ರಾನಿಕ್ಸ್ ಹಾಗೂ ಇಲೆಕ್ಟ್ರಿಕಲ್ ಉತ್ಪನ್ನಗಳಂತಹ ಪ್ರಮುಖ ವಲಯಗಳ ರಫ್ತು ಇಳಿಕೆಯಾಗುವ ಸಾಧ್ಯತೆ ಇದೆ.
ಕೆಲವು ನಿರ್ದಿಷ್ಟ ಉತ್ಪನ್ನಗಳ ವಿಭಾಗಗಳ ಸ್ಪರ್ಧೆಯಲ್ಲಿ ಭಾರತವು ಮುಂದಿದೆ. ಆದುದರಿಂದ ನಷ್ಟದಲ್ಲಿ ಸ್ಪಲ್ಪ ಪ್ರಮಾಣ ತಗ್ಗಿಸಲು ಇದು ನೆರವಾಗಲಿದೆ.
ಮೀನು ಮತ್ತು ಸಮುದ್ರ ಆಹಾರ ರಫ್ತು ಶೇ. 20.2; ಕಬ್ಬಿಣ ಹಾಗೂ ಉಕ್ಕಿನ ವಸ್ತುಗಳ ರಫ್ತು ಶೇ. 18; ವಜ್ರ, ಚಿನ್ನದ ಉತ್ಪನ್ನಗಳ ರಫ್ತು ಶೇ. 15.3; ವಾಹನ ಮತ್ತು ಅದರ ಬಿಡಿ ಭಾಗಗಳ ರಫ್ತು ಶೇ. 12.1; ಎಲೆಕ್ಟ್ರಿಕಲ್, ಟೆಲಿಕಾಂ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ರಫ್ತು ಶೇ. 12.1 ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಪ್ಲಾಸ್ಟಿಕ್, ಕಾರ್ಪೆಟ್, ಪೆಟ್ರೋಲಿಯಂ ಉತ್ಪನ್ನಗಳು, ಸಾವಯವ ರಾಸಾಯನಿಕಗಳು ಹಾಗೂ ಯಂತ್ರೋಪಕರಣಗಳ ಮೇಲೆ ನಕರಾತ್ಮಕ ಪರಿಣಾಮ ಬೀರಬಹುದು.
ಈ ಹಿನ್ನೆಡೆಯ ನಡುವೆ ಕೆಲವು ವಲಯಗಳು ಸಾಧಾರಣ ಲಾಭ ಗಳಿಸುವ ಸಾಧ್ಯತೆ ಇದೆ. ಜವಳಿ ಉತ್ಪನ್ನಗಳು, ಉಡುಪುಗಳು, ಸೆರಾಮಿಕ್ ಉತ್ಪನ್ನಗಳು, ಅಜೈವಿಕ ರಾಸಾಯನಿಕಗಳು ಹಾಗೂ ಔಷಧಗಳ ರಫ್ತಿನಲ್ಲಿ ಸಾಧಾರಣ ಗಳಿಕೆ ಕಾಣಲಿದೆ ಎಂದು ಅದು ತಿಳಿಸಿದೆ.