‘ಪ್ರತಿಸುಂಕ’ ಬಗ್ಗೆ ಅಮೆರಿಕ ಜೊತೆ ಮಾತುಕತೆ: ಕೇಂದ್ರ ವಾಣಿಜ್ಯ ಸಚಿವಾಲಯ

ಹೊಸದಿಲ್ಲಿ,ಎ.3: ಭಾರತದ ಮೇಲೆ ಶೇ.27ರಷ್ಟು ಪ್ರತಿ ಸುಂಕವನ್ನು ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆಯಿಂದ ಉಂಟಾಗಬಹುದಾದ ಪರಿಣಾಮಗಳನ್ನು ಅಧಿಕಾರಿಗಳು ಜಾಗರೂಕತೆಯಿಂದ ಪರಿಶೀಲಿಸುತ್ತಿರುವುದಾಗಿ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಬುಧವಾರ ತಿಳಿಸಿದೆ.
ಉಭಯ ರಾಷ್ಟ್ರಗಳಿಗೂ ಪ್ರಯೋಜನಕರವಾದ, ಬಹುಕ್ಷೇತ್ರೀಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಏರ್ಪಡಿಸಿಕೊಳ್ಳುವ ಬಗ್ಗೆ ಅಮೆರಿಕದ ಜೊತೆ ಮಾತುಕತೆಗಳು ನಡೆಯುತ್ತಿದೆಯೆಂದು ಅದು ಹೇಳಿದೆ.
ಕೇಂದ್ರದಿಂದ ಪರಾಮರ್ಶೆ:
ಭಾರತದ ಉತ್ಪನ್ನಗಳ ಮೇಲೆ ಅಮೆರಿಕವು ಪ್ರತಿ ಸುಂಕ ವಿಧಿಸಿರುವುದರಿಂದ ಉಂಟಾಗಿರುವ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿರುವುದಾಗಿ ಕೇಂದ್ರ ವಿತ್ತ ಖಾತೆಯ ಸಹಾಯಕ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.
ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ)ವು ಬುಧವಾರ ಹೊಸದಿಲ್ಲಿಯಲ್ಲಿ ಆಯೋಜಿಸಿದ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘‘ಟ್ರಂಪ್ ಅವರ ಆದ್ಯತೆ ಅಮೆರಿಕ ಆಗಿದ್ದರೆೆ, ಮೋದಿ ಅವರಿಗೆ ಭಾರತವು ಆದ್ಯತೆಯಾಗಿದೆ. ಅಮೆರಿಕವು ವಿಧಿಸಿರುವ ಪ್ರತಿ ಸುಂಕಗಳ ಪರಿಣಾಮವನ್ನು ನಾವು ಅಂದಾಜಿಸುತ್ತಿದ್ದೇವೆ ಎಂದರು.