ತೆಲಂಗಾಣ | ದೇವಸ್ಥಾನದ ಬಳಿ ಮಹಿಳೆಯ ಸಾಮೂಹಿಕ ಅತ್ಯಾಚಾರ, ಮೈಮೇಲೆ ಮೂತ್ರ ವಿಸರ್ಜನೆ ಮಾಡಿ ಚಿತ್ರಹಿಂಸೆ
Credit: iStock Photo
ಹೈದರಾಬಾದ್: ನಾಗರಕರ್ನೂಲ್ ಜಿಲ್ಲೆಯ ದೇವಸ್ಥಾನವೊಂದರ ಬಳಿ ಮಹಿಳೆ ಮೇಲೆ ಅತ್ಯಾಚಾರ, ಮೈಮೇಲೆ ಮೂತ್ರ ವಿಸರ್ಜನೆ ಮಾಡಿ ಚಿತ್ರಹಿಂಸೆ ಆರೋಪದಲ್ಲಿ 7 ಮಂದಿ ಆರೋಪಿಗಳನ್ನು ಉರ್ಕೊಂಡ ಪೊಲೀಸರು ಬಂಧಿಸಿದರು.
ಅತ್ಯಾಚಾರ ಸಂತ್ರಸ್ತೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆಂಜನೇಯುಲು(25), ಸಾದಿಕ್ ಬಾಬಾ(28), ಮಣಿಕಂಠ(21), ಕಾರ್ತಿಕ್(20), ಮಟ್ಟಾ ಮಹೇಶ್ ಗೌಡ್(28), ಹರೀಶ್ ಗೌಡ್(23) ಮತ್ತು ಮಟ್ಟಾ ಆಂಜನೇಯುಲು (24) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.
ನಾಗರಕರ್ನೂಲ್ ಎಸ್ಪಿ ವೈಭವ್ ಗಾಯಕ್ವಾಡ್ ಈ ಕುರಿತು ಪ್ರತಿಕ್ರಿಯಿಸಿ, ಆರೋಪಿಗಳು ಮಹಿಳೆಯನ್ನು ಬೆದರಿಸಿ ಒಬ್ಬರ ಹಿಂದೆ ಒಬ್ಬರಂತೆ ಅತ್ಯಾಚಾರ ಎಸಗಿದರು. ಇದು ಗಂಭೀರ ಮತ್ತು ಹೇಯ ಸಾಮೂಹಿಕ ಅತ್ಯಾಚಾರವಾಗಿದೆ. ದೂರು ದಾಖಲಿಸಿದ ಬೆನ್ನಲ್ಲೇ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಓರ್ವನಾದ ಮಹೇಶ್ ಗೌಡ್ ದೇವಸ್ಥಾನದ ಹೊರಗುತ್ತಿಗೆ ಸಿಬ್ಬಂದಿ ಎಂದು ಹೇಳಿದರು.
ಮಾರ್ಚ್ 29ರಂದು ಮಹಿಳೆ ತನ್ನ ಪೋಷಕರು ಮತ್ತು ಮಕ್ಕಳೊಂದಿಗೆ ಉರ್ಕೊಂಡದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದಳು. ದೇವರ ದರ್ಶನದ ಬಳಿಕ ದೇವಸ್ಥಾನದ ಆವರಣದಲ್ಲಿ ಮಲಗಿದಳು. ರಾತ್ರಿ 11 ಗಂಟೆ ಸುಮಾರಿಗೆ ಆಕೆ ದೇವಸ್ಥಾನದ ಹಿಂದಿನ ಬಯಲಿಗೆ ಹೋದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಆರೋಪಿ ಕಾರ್ತಿಕ್ ಅತ್ಯಾಚಾರದ ಬಳಿಕ ನೀರಿನ ಬಾಟಲಿ ನೀಡಿದಾಗ ಅವಳು ಅದನ್ನು ಎಸೆದಳು. ಇದರಿಂದ ಸಿಟ್ಟಿಗೆದ್ದ ಕಾರ್ತಿಕ್ ಆಕೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ. ಮಹೇಶ್ ಗೌಡ್ ಸಂತ್ರಸ್ತೆಯ ಸಂಬಂಧಿಗೆ ಥಳಿಸಿ 6,000 ರೂಪಾಯಿ ನಗದನ್ನು ದೋಚಿದ್ದಾನೆ. ಆಂಜನೇಯುಲು ಮಹಿಳೆಯ ಪೋಟೊ ತೆಗೆದು ಕೃತ್ಯವನ್ನು ಬಹಿರಂಗಪಡಿಸದಂತೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ, ಡಕಾಯಿತಿ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.