ಆರೋಪಿಗಳ ಅಪರಾಧ ಸಾಬೀತುಪಡಿಸುವಲ್ಲಿ ಸಿಬಿಐ ‘ದಯನೀಯವಾಗಿ ವಿಫಲವಾಗಿದೆʼ: ನ್ಯಾಯಾಲಯ
CBI | PC : PTI
ಹೊಸದಿಲ್ಲಿ: 2008ರಲ್ಲಿ ನ್ಯಾಯಾಧೀಶರ ಮನೆ ಬಾಗಿಲಲ್ಲಿ ನಗದು ಹಣ ಪತ್ತೆಯಾಗಿರುವ ಪ್ರಕರಣದ ಆರೋಪಿಗಳ ಅಪರಾಧ ಸಾಬೀತು ಮಾಡುವಲ್ಲಿ ಸಿಬಿಐ ‘‘ದಯನೀಯವಾಗಿ ವಿಫಲವಾಗಿದೆ’’ ಎಂದು ವಿಶೇಷ ಸಿಬಿಯ ನ್ಯಾಯಾಲಯವೊಂದು ಹೇಳಿದೆ.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನಿರ್ಮಲ್ ಯಾದವ್ ಸೇರಿದಂತೆ ಪ್ರಕರಣದ ನಾಲ್ವರು ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯವು ಮಾರ್ಚ್ 29ರಂದು ದೋಷಮುಕ್ತಗೊಳಿಸಿತ್ತು.
2008 ಆಗಸ್ಟ್ 13ರಂದು, ರೂ. 15 ಲಕ್ಷ ನಗದು ಹಣವನ್ನು ಒಳಗೊಂಡ ಪೊಟ್ಟಣವೊಂದನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಇನ್ನೋರ್ವ ನ್ಯಾಯಾಧೀಶೆ ನಿರ್ಮಲ್‌ಜಿತ್ ಕೌರ್ ಅವರ ಮನೆ ಬಾಗಿಲಿಗೆ ತಪ್ಪಾಗಿ ತಲುಪಿಸಲಾಗಿತ್ತು ಎನ್ನಲಾಗಿದೆ. ಅದು ನ್ಯಾಯಾಧೀಶ ಯಾದವ್‌ಗೆ ತಲುಪಬೇಕಾಗಿದ್ದ ಹಣ ಎನ್ನಲಾಗಿದೆ. ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಭಾವ ಬೀರುವುದಕ್ಕಾಗಿ ಆ ಹಣವನ್ನು ನ್ಯಾಯಾಧೀಶನಿಗೆ ನೀಡಲು ಉದ್ದೇಶಿಸಲಾಗಿತ್ತು ಎನ್ನಲಾಗಿದೆ.
‘‘ಆರೋಪಿಗಳ ಅಪರಾಧವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ದಯನೀಯ ವೈಫಲ್ಯ ಕಂಡಿದೆ. ಅದರ ಪರಿಣಾಮವಾಗಿ ಆರೋಪಿಗಳಾದ ರವೀಂದರ್ ಭಾಸಿನ್, ರಾಜೀವ್ ಗುಪ್ತಾ, ನಿರ್ಮಲ್ ಸಿಂಗ್ ಮತ್ತು ನಿರ್ಮಲ್ ಯಾದವ್‌ರನ್ನು ಈ ಮೂಲಕ ದೋಷಮುಕ್ತರನ್ನಾಗಿಸಲಾಗುತ್ತಿದೆ’’ ಎಂದು ಮಾರ್ಚ್ 29ರಂದು ಘೋಷಿಸಿದ ತೀರ್ಪಿನಲ್ಲಿ ನ್ಯಾಯಾಲಯ ಹೇಳಿದೆ. ತೀರ್ಪನ್ನು ಎಪ್ರಿಲ್ 3ರಂದು ಸಾರ್ವಜನಿಕವಾಗಿ ಬಿಡುಗಡೆಗೊಳಿಸಲಾಗಿದೆ.
‘‘ಪ್ರಕರಣವನ್ನು ಕೊನೆಗೊಳಿಸುವ ವರದಿಯನ್ನು ಸಲ್ಲಿಸುವ ತನ್ನ ಮೂಲ ನಿರ್ಧಾರಕ್ಕೆ ಸಿಬಿಐ ಅಂಟಿಕೊಂಡಿದ್ದರೆ ಒಳ್ಳೆಯದಿತ್ತು. ಬದಲಿಗೆ ಅದು ಆರ್.ಕೆ. ಜೈನ್ ಎಂಬ ಹೆಸರಿನ ಅತ್ಯಂತ ಅಪನಂಬಿಕಸ್ತ ಸಾಕ್ಷಿಯನ್ನು ತಂದಿತು. ಅವರ ಸಾಕ್ಷಿಯು ಅಂತೆಕಂತೆಗಳು, ಊಹಾಪೋಹಗಳು, ಊಹಾ ಸಿದ್ಧಾಂತಗಳು ಮತ್ತು ಸುಳ್ಳುಗಳನ್ನು ಆಧರಿಸಿತ್ತು’’ ಎಂದು ನ್ಯಾಯಾಲಯ ಹೇಳಿದೆ.
ಆರೋಪಿಗಳ ಅಪರಾಧವನ್ನು ನಿಸ್ಸಂಧಿಗ್ಧವಾಗಿ ಸಾಬೀತುಪಡಿಸುವ ಒಂದು ಕಾಳಿನಷ್ಟೂ ಪುರಾವೆಯನ್ನು ಪ್ರಾಸಿಕ್ಯೂಶನ್ ನೀಡಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.