ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆಗೆ ಕೇರಳ ಕ್ಯಾಥೊಲಿಕ್ ಬಿಷಪ್ ಗಳ ಬೆಂಬಲ!

Photo : kcbc.co.in
ತಿರುವನಂತಪುರಂ: ಕಾಂಗ್ರೆಸ್ ಹಾಗೂ ಎಡಪಕ್ಷಗಳೆರಡರಿಂದಲೂ ವಿರೋಧ ಎದುರಿಸುತ್ತಿರುವ ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆಯ ಪರವಾಗಿ ಮತ ಚಲಾಯಿಸುವಂತೆ ರಾಜ್ಯದ ಸಂಸದರಿಗೆ ಕೇರಳ ಕ್ಯಾಥೊಲಿಕ್ ಬಿಷಪ್ ಗಳ ಮಂಡಳಿ ಮನವಿ ಮಾಡಿದೆ.
ಕೇರಳ ಕ್ಯಾಥೊಲಿಕ್ ಬಿಷಪ್ ಗಳ ಮಂಡಳಿಯ ಈ ನಿಲುವನ್ನು ಕೇರಳದಲ್ಲಿ ಕ್ರಿಶ್ಚಿಯನ್ನರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿರುವ ಬಿಜೆಪಿ ಶ್ಲಾಘಿಸಿದೆ.
ಸೈರೊ-ಮಲಬಾರ್, ಲ್ಯಾಟಿನ್ ಹಾಗೂ ಸೈರೊ-ಮಲಂಕಾರ ಚರ್ಚ್ ಗಳಿಗೆ ಸಂಬಂಧಿಸಿದ ಕೇರಳ ಕ್ಯಾಥೊಲಿಕ್ ಬಿಷಪ್ ಗಳ ಮಂಡಳಿಯು ಕೇರಳದ ಕ್ಯಾಥೊಲಿಕ್ ಬಿಷಪ್ ಗಳ ಬಲಿಷ್ಠ ಸಂಘಟನೆಯಾಗಿದೆ.
ಸದ್ಯ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮತ್ತೆ ಮಂಡಿಸುವ ನಿರೀಕ್ಷೆ ಇದೆ.
ಈ ಕುರಿತು ಶನಿವಾರ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಕಾರ್ಡಿನಲ್ ಬೆಸೆಲಿಯಸ್ ಕ್ಲೀಮಿಸ್, “ಸಂಸತ್ತಿನಲ್ಲಿ ಮಸೂದೆಯ ಚರ್ಚೆಯನ್ನು ಕೈಗೆತ್ತಿಕೊಂಡಾಗ, ನ್ಯಾಯಯುತವಲ್ಲದ ಹಾಗೂ ಅಸಾಂವಿಧಾನಿಕ ನಿಯಮಗಳ ತಿದ್ದುಪಡಿಯ ಪರವಾಗಿ ಕೇರಳದ ಜನ ಪ್ರತಿನಿಧಿಗಳು ಮತ ಚಲಾಯಿಸಬೇಕು” ಎಂದು ಆಗ್ರಹಿಸಿದ್ದಾರೆ.
ಹಲವು ತಲೆಮಾರುಗಳಿಂದ ಕ್ರಿಶ್ಚಿಯನ್ ನಿವಾಸಿಗಳು ಒಡೆತನ ಹೊಂದಿರುವ ಎರ್ನಾಕುಲಂ ಜಿಲ್ಲೆಯ ಮುನಂಬಮ್ ನಲ್ಲಿರುವ ಸುಮಾರು 400ಕ್ಕೂ ಹೆಚ್ಚು ಎಕರೆ ಜಮೀನಿನ ಮೇಲೆ ವಕ್ಫ್ ಮಂಡಳಿ ಹಕ್ಕು ಚಲಾಯಿಸುತ್ತಿರುವುದನ್ನು ಉಲ್ಲೇಖಿಸಿರುವ ಕಾರ್ಡಿನಾಲ್, “ಜಮೀನಿನ ಸ್ವಾಧೀನದಾರರು ತಮ್ಮ ಕಾನೂನಾತ್ಮಕ ಹಕ್ಕನ್ನು ಅನುಭವಿಸುವುದನ್ನು ತಡೆಯುತ್ತಿರುವ ವಕ್ಫ್ ಕಾಯ್ದೆಯ ವಿವಿಧ ಕಂಡಿಕೆಗಳನ್ನು ತಿದ್ದುಪಡಿ ಮಾಡಲೇಬೇಕಿದೆ. ಕೋಯಿಕ್ಕೋಡ್ ನಲ್ಲಿರುವ ಫಾರೂಖ್ ಕಾಲೇಜ್ ವ್ಯವಸ್ಥಾಪಕ ಮಂಡಳಿಯು ಸ್ವಾಧೀನದಾರರಿಗೆ ಜಮೀನು ಮಾರಾಟ ಮಾಡಿದ್ದರೂ, ಆ ಜಮೀನನ್ನು ಉಡುಗೊರೆ ನೀಡಲಾಗಿತ್ತು ಎಂದು ಹೇಳುತ್ತಿದೆ. ಹೀಗಾಗಿ, ಈ ಜಮೀನಿನ ಮೇಲೆ ವಕ್ಫ್ ಮಂಡಳಿ ಹಕ್ಕು ಚಲಾಯಿಸುವುದನ್ನು ತಡೆಯಲು ರಾಜ್ಯದ ಜನ ಪ್ರತಿನಿಧಿಗಳು ತಿದ್ದುಪಡಿಯ ಪರವಾಗಿ ಮತ ಚಲಾಯಿಸಬೇಕು” ಎಂದು ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ, ಕೇರಳ ಕ್ಯಾಥೊಲಿಕ್ ಬಿಷಪ್ ಗಳ ಮಂಡಳಿಯು ಈ ಕುರಿತು ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಪರಿಶೀಲನೆ ನಡೆಸುತ್ತಿದ್ದ ಜಂಟಿ ಸದನ ಸಮಿತಿಗೆ ಮನವಿ ಪತ್ರ ಸಲ್ಲಿಸಿತ್ತು.
ಮುನಂಬಮ್ ಜಮೀನು ವಿವಾದದ ಕಾರಣಕ್ಕೆ ಕೇರಳದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ವಿಷಯವು ಮಹತ್ವ ಪಡೆದುಕೊಂಡಿದ್ದು, ಈ ಜಮೀನಿನ ಮೇಲೆ ಹಕ್ಕು ಚಲಾಯಿಸುತ್ತಿರುವ ವಕ್ಫ್ ಮಂಡಳಿಯ ವಿರುದ್ಧ ಸ್ಥಳೀಯ ನಿವಾಸಿಗಳು ಬಹಿರಂಗ ಪ್ರತಿಭಟನೆ ನಡೆಸಿದ್ದರು.