ಉತ್ತರ ಪ್ರದೇಶ: ವಕ್ಫ್ ಮಸೂದೆ ವಿರೋಧಿಸಿ ಮೌನ ಪ್ರತಿಭಟನೆ ನಡೆಸಿದ್ದ 300ಕ್ಕೂ ಅಧಿಕ ಮಂದಿಗೆ 2 ಲಕ್ಷ ರೂ.ಬಾಂಡ್ ಸಲ್ಲಿಸುವಂತೆ ನೋಟಿಸ್

Photo credit: mediaoneonline.com
ಮುಝಫ್ಫರ್‌ನಗರ(ಉ.ಪ್ರ): ವಕ್ಫ್ ತಿದ್ದುಪಡಿಯ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಕಪ್ಪು ಪಟ್ಟಿಗಳನ್ನು ಧರಿಸಿದ್ದಕ್ಕಾಗಿ ತಲಾ ಎರಡು ಲಕ್ಷ ರೂ.ಗಳ ಬಾಂಡ್ ಸಲ್ಲಿಸುವಂತೆ ಅಧಿಕಾರಿಗಳು ಇನ್ನಷ್ಟು ಜನರಿಗೆ ನೋಟಿಸ್‌ಗಳನ್ನು ಜಾರಿಗೊಳಿಸಿದ್ದು, ಇಂತಹವರ ಸಂಖ್ಯೆ ಈಗ 300ನ್ನು ದಾಟಿದೆ.
ಪವಿತ್ರ ರಮಝಾನ್ ಮಾಸದ ಕೊನೆಯ ಶುಕ್ರವಾರವಾಗಿದ್ದ ಮಾ.28ರಂದು ಅಲ್ವಿದಾ ನಮಾಝ್ ಸಂದರ್ಭದಲ್ಲಿ ಇಲ್ಲಿಯ ನಿವಾಸಿಗಳು ತಮ್ಮ ತೋಳುಗಳಿಗೆ ಕಪ್ಪುಪಟ್ಟಿಗಳನ್ನು ಧರಿಸಿಕೊಂಡು ಮಸೂದೆಯ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು.
ಅದು ಯಾವುದೇ ಘೋಷಣೆಗಳು ಅಥವಾ ಪೋಸ್ಟರ್‌ಗಳಿಲ್ಲದ ಮೌನ ಪ್ರತಿಭಟನೆಯಾಗಿತ್ತು ಮತ್ತು ಅದಕ್ಕಾಗಿ ನೋಟಿಸ್‌ಗಳನ್ನು ಜಾರಿಗೊಳಿಸಿದ್ದು ನ್ಯಾಯಸಮ್ಮತವಲ್ಲ ಎಂದು ನಮಾಝ್‌ನಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯೋರ್ವರು ಹೇಳಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರ ಪೈಕಿ ಕೆಲವರಿಗೆ ಗುರುವಾರ ಅವರ ಮನೆಬಾಗಿಲಿಗೆ ನೋಟಿಸ್‌ಗಳನ್ನು ತಲುಪಿಸಲಾಗಿದ್ದರೆ ಇತರರಿಗೆ ವಾಟ್ಸ್‌ಆ್ಯಪ್ ಮೂಲಕ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಪೋಲಿಸ್ ವರದಿಯ ಆಧಾರದಲ್ಲಿ ನಗರ ದಂಡಾಧಿಕಾರಿ ವಿಕಾಶ ಕಶ್ಯಪ್ ಅವರು ಈ ನೋಟಿಸ್‌ಗಳನ್ನು ಹೊರಡಿಸಿದ್ದಾರೆ.
‘ಭವಿಷ್ಯದಲ್ಲಿ ನೀವು ಸಾರ್ವಜನಿಕರನ್ನು ಪ್ರಚೋದಿಸುವ ಮೂಲಕ ಶಾಂತಿಯನ್ನು ಕದಡಬಹುದು. ಹೀಗಾಗಿ ಎ.16ರಂದು ಬೆಳಿಗ್ಗೆ 10 ಗಂಟೆಗೆ ಈ ನ್ಯಾಯಾಲಯದಲ್ಲಿ ಹಾಜರಾಗಿ ನಿಮ್ಮಿಂದ ಒಂದು ವರ್ಷದ ಅವಧಿಗೆ ಎರಡು ಲಕ್ಷ ರೂ.ಗಳ ಬಾಂಡ್‌ಗಳನ್ನು ಏಕೆ ಪಡೆದುಕೊಳ್ಳಬಾರದು ಎನ್ನುವುದಕ್ಕೆ ಕಾರಣವನ್ನು ನೀಡತಕ್ಕದ್ದು’ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ಪ್ರತಿಭಟನೆಗೆ ಕರೆ ನೀಡಿತ್ತು.