ಪ್ರಧಾನಿಯ ಪಾಂಬನ್ ಕಾರ್ಯಕ್ರಮಕ್ಕೆ ಸ್ಟಾಲಿನ್ ಗೈರು; ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಗೆ ಆಗ್ರಹ

ಎಂ.ಕೆ.ಸ್ಟಾಲಿನ್ | PC : PTI
ಚೆನ್ನೈ: ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಕುರಿತು ತಮಿಳುನಾಡು ಜನರಲ್ಲಿ ಮನೆ ಮಾಡಿರುವ ಆತಂಕಗಳನ್ನು ನಿವಾರಿಸುವ ಭರವಸೆ ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದ್ದಾರೆ. ಸಂಸತ್ತಿನ ಸ್ಥಾನಗಳಲ್ಲಿ ರಾಜ್ಯದ ಶೇಕಡಾವಾರು ಪಾಲು ಬದಲಾಗುವುದಿಲ್ಲ ಎನ್ನುವುದನ್ನೂ ಪ್ರಧಾನಿ ಖಚಿತಪಡಿಸಬೇಕು ಎಂದೂ ಅವರು ಹೇಳಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿ ನೂತನ ಪಾಂಬನ್ ಸೇತುವೆಯನ್ನು ರವಿವಾರ ಮೋದಿಯವರು ಉದ್ಘಾಟಿಸಿದ ಸಂದರ್ಭದಲ್ಲಿಯೇ ಸ್ಟಾಲಿನ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ. ಮೋದಿಯವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ ಸ್ಟಾಲಿನ್ ಗೈರುಹಾಜರಿ ಎದ್ದು ಕಾಣುತ್ತಿತ್ತು.
ಜನಸಂಖ್ಯಾ ಬೆಳವಣಿಗೆಯನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ತಮಿಳುನಾಡು ಮತ್ತು ಇತರ ರಾಜ್ಯಗಳನ್ನು ಕ್ಷೇತ್ರ ಪುನರ್ವಿಂಗಡಣೆ ವೇಳೆ ದಂಡಿಸುವುದಿಲ್ಲ. ಅವುಗಳ ಸಂಸತ್ ಸ್ಥಾನಗಳ ಶೇಕಡಾವಾರು ಪ್ರಮಾಣದಲ್ಲಿ ಯಾವುದೇ ಬದಲಾವಣೆಯನ್ನು ಮಾಡುವುದಿಲ್ಲ ಎಂದು ತಮಿಳುನಾಡಿನ ನೆಲದಲ್ಲಿ ನಿಂತು ಪ್ರಧಾನಿಯವರು ಸ್ಪಷ್ಟ ಖಾತರಿಯನ್ನು ನೀಡಬೇಕು ಎಂದು ಸ್ಟಾಲಿನ್ ಹೇಳಿದರು.
ಪ್ರಧಾನಿಯವರು ಸಂಸತ್ತಿನಲ್ಲಿ ನಿರ್ಣಯವೊಂದನ್ನು ಅಂಗೀಕರಿಸುವ ಮೂಲಕ ನ್ಯಾಯಯುತ ಕ್ಷೇತ್ರ ಪುನರ್ವಿಂಗಡಣೆಯನ್ನು ಖಚಿತಪಡಿಸಬೇಕು ಎಂದು ಹೇಳಿದ ಸ್ಟಾಲಿನ್,‘ಮೋದಿಯವರು ಸಾರ್ವಜನಿಕವಾಗಿ ಈ ಭರವಸೆಯನ್ನು ನೀಡಬೇಕು. ತಮಿಳುನಾಡು ಜನತೆಯ ಆತಂಕವನ್ನು ನಿವಾರಿಸಬೇಕು ಮತ್ತು ಸಂಸತ್ತಿನಲ್ಲಿ ಸಾಂವಿಧಾನಿಕ ತಿದ್ದುಪಡಿಯೊಂದಿಗೆ ಅದನ್ನು ಅನುಸರಿಸಬೇಕು. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ನ್ಯಾಯಯುತವಾಗಿ ನಡೆಯಲು ಇದೊಂದೇ ಮಾರ್ಗವಾಗಿದೆ. ಅವರು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಾನು ಪ್ರಾಮಾಣಿಕವಾಗಿ ಆಶಿಸಿದ್ದೇನೆ’ ಎಂದರು.
ಕ್ಷೇತ್ರ ಪುನರ್ವಿಂಗಡಣೆಯು 1971ರ ಜನಗಣತಿ ಅಂಕಿ ಅಂಶಗಳನ್ನು ಆಧರಿಸಿರಬೇಕು ಮತ್ತು ಈ ಬಗ್ಗೆ 2001ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವ್ಯಕ್ತಪಡಿಸಿದ್ದ ಬದ್ಧತೆಯನ್ನು ಕೇಂದ್ರ ಸರಕಾರವು ಎತ್ತಿ ಹಿಡಿಯಬೇಕು ಎಂದು ತಮಿಳುನಾಡಿನ ರಾಜಕೀಯ ಪಕ್ಷಗಳು ಆಗ್ರಹಿಸಿವೆ.
ಮೋದಿಯವರು ವಾಜಪೇಯಿಯವರ ಭರವಸೆಗೆ ಅನುಗುಣವಾಗಿ 2026ರ ನಂತರ ಇನ್ನೂ 30 ವರ್ಷಗಳ ಕಾಲ ಈ ವ್ಯವಸ್ಥೆಯನ್ನು ಮುಂದುವರಿಸುವುದಾಗಿ ಸಂಸತ್ತಿನಲ್ಲಿ ಭರವಸೆ ನೀಡಬೇಕು ಎಂದು ಹೇಳಿದ ಸ್ಟಾಲಿನ್, 2026ರ ಜನಗಣತಿಯ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆಯನ್ನು ನಡೆಸಿದರೆ ತಮಿಳುನಾಡು ಮತ್ತು ದಕ್ಷಿಣದ ಇತರ ರಾಜ್ಯಗಳು ಸಂಸತ್ತಿನಲ್ಲಿ ನ್ಯಾಯಯುತ ಪ್ರಾತಿನಿಧ್ಯವನ್ನು ಕಳೆದುಕೊಳ್ಳುತ್ತವೆ ಎಂದು ಬೆಟ್ಟು ಮಾಡಿದರು.