ಕನಿಷ್ಠ ಪಕ್ಷ ಪತ್ರಗಳಿಗೆ ತಮಿಳಿನಲ್ಲಿ ಸಹಿ ಮಾಡಿ: ತಮಿಳುನಾಡು ರಾಜಕಾರಣಿಗಳನ್ನು ವ್ಯಂಗ್ಯವಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ (PTI)
ಚೆನ್ನೈ; ಕೇಂದ್ರ ಸರಕಾರ ಹಾಗೂ ತಮಿಳುನಾಡು ಸರಕಾರದ ನಡುವಿನ ಭಾಷಾ ವಿವಾದ ತಾರಕಕ್ಕೇರಿರುವ ಹೊತ್ತಿನಲ್ಲೇ, ಬಡ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲು ವೈದ್ಯಕೀಯ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಪ್ರಾರಂಭಿಸಿ ಎಂದು ರವಿವಾರ ತಮಿಳುನಾಡು ಸರಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಇದೇ ವೇಳೆ, ತಮಿಳುನಾಡು ರಾಜಕಾರಣಿಗಳು ಪತ್ರಗಳಿಗೂ ತಮಿಳಿನ ಬದಲು ಇಂಗ್ಲಿಷ್ ನಲ್ಲಿ ಸಹಿ ಮಾಡುತ್ತಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಪಾಲ್ಕ್ ಜಲಸಂಧಿಯುದ್ದಕ್ಕೂ ಪಂಬನ್ ನಲ್ಲಿ ನಿರ್ಮಿಸಲಾಗಿರುವ ದೇಶದ ಮೊಟ್ಟ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯ ಉದ್ಘಾಟನೆ ಹಾಗೂ ವಿವಿಧ ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಆದರೆ, ಕಳೆದ ಕೆಲವು ವಾರಗಳಿಂದ ತಮಿಳುನಾಡಿನಲ್ಲಿ ಸುದ್ದಿಯಲ್ಲಿರುವ ವಿವಾದಾತ್ಮಕ ವಿಷಯಗಳಾದ ಕ್ಷೇತ್ರ ಪುನರ್ವಿಂಗಡನೆ ಹಾಗೂ ಕಚ್ಚತ್ತೀವು ದ್ವೀಪದ ಕುರಿತು ಪ್ರಸ್ತಾಪಿಸುವುದರಿಂದ ಅವರು ದೂರ ಉಳಿದರು.
ಇದಕ್ಕೂ ಮುನ್ನ, ನೀಲ್ ಗಿರೀಸ್ ನಲ್ಲಿ ವೈದ್ಯಕೀಯ ಕಾಲೇಜೊಂದನ್ನು ಉದ್ಘಾಟಿಸಿ ಮಾತನಾಡಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, 2026ರಲ್ಲಿ ಬಾಕಿ ಇರುವ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ನ್ಯಾಯಯುತ ಹಾಗೂ ಪಾರದರ್ಶಕವಾಗಿ ನಡೆಸುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದ್ದರು. ಮಾರ್ಚ್ 22ರಂದು ಚೆನ್ನೈನಲ್ಲಿ ಮುಖ್ಯಾಮಂತ್ರಿಗಳ ಜಂಟಿ ಕ್ರಿಯಾ ಸಮಿತಿಯ ಪ್ರಪ್ರಥಮ ಸಭೆಯ ಅಧ್ಯ ಕ್ಷತೆಯನ್ನು ವಹಿಸಿದ್ದ ಎಂ.ಕೆ.ಸ್ಟಾಲಿನ್, 2026ರ ನಂತರವೂ ಮತ್ತೆ 25 ವರ್ಷಗಳ ಕಾಲ 543 ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿಡಬೇಕು ಎಂದು ಆಗ್ರಹಿಸಿದ್ದರು.
ರೈಲು ಸೇವೆಗಳ ಪುನಾರಂಭಕ್ಕೆ ಅವಕಾಶ ನೀಡುವ ಭೂಮಾರ್ಗದ ಮೂಲಕ ರಾಮೇಶ್ವರಂ ಅನ್ನು ಸಂಪರ್ಕಿಸುವ ಸೇತುವೆಯನ್ನು ಉದ್ಘಾಟಿಸಲು ರಾಮನವಮಿ ದಿನವನ್ನು ಆಯ್ದುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಮೇಶ್ವರಂನಲ್ಲಿರುವ ಪ್ರಸಿದ್ಧ ರಾಮನಾಥಸ್ವಾಮಿ ದೇವಾಲಯದಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸಿದರು. ಈ ವೇಳೆ, ನಾನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ನಲ್ಲಿ ಶ್ರೀಲಂಕಾದಲ್ಲಿನ ಅನುರಾಧಪುರದಿಂದ ಮರಳುವಾಗ, ರಾಮಸೇತುವಿನ ದರ್ಶನದಿಂದ ಪುನೀತನಾದೆ ಎಂದೂ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.