ಉತ್ತರ ಪ್ರದೇಶ | ಸುಲಿಗೆಗಾಗಿ ನಕಲಿ ಪೊಲೀಸ್ ಠಾಣೆಯನ್ನೇ ತೆರೆದ ಪೊಲೀಸರು !

Update: 2025-04-06 15:34 IST
ಉತ್ತರ ಪ್ರದೇಶ | ಸುಲಿಗೆಗಾಗಿ ನಕಲಿ ಪೊಲೀಸ್ ಠಾಣೆಯನ್ನೇ ತೆರೆದ ಪೊಲೀಸರು !

ಸಾಂದರ್ಭಿಕ ಚಿತ್ರ (PTI)

  • whatsapp icon

ಲಕ್ನೋ: ಉತ್ತರ ಪ್ರದೇಶದಲ್ಲಿ ಮೂವರು ಪೊಲೀಸರು ನಕಲಿ ಪೊಲೀಸ್ ಠಾಣೆಯನ್ನು ತೆರೆದು ಕಳೆದ ಒಂದು ವರ್ಷದಿಂದ ಜನರನ್ನು ಲಾಕಪ್‌ನಲ್ಲಿರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿರುವುದು ಬಯಲಾಗಿದೆ.

ಸಬ್ ಇನ್ಸ್‌ಪೆಕ್ಟರ್‌ ಬಲ್ಬೀರ್ ಸಿಂಗ್ ಮತ್ತು ಕಾನ್ಸ್ಟೇಬಲ್‌ಗಳಾದ ಹಿಮಾಂಶು ತೋಮರ್ ಮತ್ತು ಮೋಹಿತ್ ಕುಮಾರ್ ನಕಲಿ ಪೊಲೀಸ್ ಠಾಣೆಯನ್ನು ತೆರೆದ ಆರೋಪಿಗಳು.

ಉತ್ತರಪ್ರದೇಶದ ಕಸ್ಬಾದಲ್ಲಿ ರಬ್ಬರ್ ಫ್ಯಾಕ್ಟರಿಯೊಂದರ ಒಂದು ಭಾಗವನ್ನು ಪೊಲೀಸ್ ಠಾಣೆಯಾಗಿ ಪರಿವರ್ತಿಸಿದ ಆರೋಪಿಗಳು, ನಕಲಿ ಲಾಕ್ಅಪ್ ವ್ಯವಸ್ಥೆಯನ್ನು ಕೂಡ ಮಾಡಿದರು. ಜನರ ಮೇಲೆ ಸುಳ್ಳು ಆರೋಪ ಹೊರಿಸಿ ಲಾಕಪ್‌ನಲ್ಲಿರಿಸಿ ಸುಲಿಗೆ ಮಾಡುತ್ತಿದ್ದರು ಎಂದು telegraphindia.com ವರದಿ ಮಾಡಿದೆ.

ಶುಕ್ರವಾರ ಸಬ್ ಇನ್ಸ್ಪೆಕ್ಟರ್ ಬಲ್ಬೀರ್ ಸಿಂಗ್, ಕಾನ್ಸ್ಟೇಬಲ್‌ಗಳಾದ ಹಿಮಾಂಶು ತೋಮರ್ ಮತ್ತು ಮೋಹಿತ್ ಕುಮಾರ್ ಭಿತೌರ ಗ್ರಾಮದ ರೈತರೋರ್ವರ ನಿವಾಸಕ್ಕೆ ನುಗ್ಗಿ ಮನೆಯವರು ಡ್ರಗ್ಸ್ ಮತ್ತು ಅಕ್ರಮ ವಸ್ತುಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿದರು. ಇದಲ್ಲದೆ, ರೈತನ ಪುತ್ರನ ಪಕ್ಕದಲ್ಲಿ ಕುರ್ಚಿಯ ಮೇಲೆ ಪಿಸ್ತೂಲ್ ಇರಿಸಿ ವೀಡಿಯೊವನ್ನು ಚಿತ್ರೀಕರಿಸಿದರು ಎಂದು ಆರೋಪಿಸಲಾಗಿದೆ.

ʼನಾನು ನನ್ನ ಮನೆಯಲ್ಲಿ ಕಾನೂನುಬಾಹಿರ ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಬಲ್ಬೀರ್ ಸಿಂಗ್ ಹೇಳಿದರು. ಅವರು ಮನೆಯನ್ನು ದೋಚಿದರು. ನನ್ನನ್ನು ರಬ್ಬರ್ ಫ್ಯಾಕ್ಟರಿಗೆ ಕರೆದೊಯ್ದು ಲಾಕಪ್‌ನಲ್ಲಿ ಇರಿಸಿದರು. ಇದು ನಿಜವಾದ ಪೊಲೀಸ್ ಠಾಣೆ ಅಲ್ಲ ಎಂದು ನಮಗೆ ತಿಳಿದಿರಲಿಲ್ಲ. ಅವರು 2 ಲಕ್ಷ ರೂ. ಕೊಡುವಂತೆ ಬೇಡಿಕೆಯಿಟ್ಟರು. ಅವರಿಗೆ ಹಣ ನೀಡಿದರೂ ಬಿಡುಗಡೆ ಮಾಡಿಲ್ಲ. ಹೆಚ್ಚಿನ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾರೆ. ಬಳಿಕ ನನ್ನ ಪುತ್ರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಿದ ಎಂದು ಸಂತ್ರಸ್ತ ರೈತ ಹೇಳಿದರು.

ಈ ಕುರಿತು ಬರೇಲಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ, ಶುಕ್ರವಾರ ಸಂಜೆ ಫತೇಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ಬಾ ಚೌಕಿಯ ಪ್ರಭಾರಿ ಅಧಿಕಾರಿ, ವ್ಯಕ್ತಿಯೋರ್ವನನ್ನು ಬಂಧಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತ್ತು. ಈ ಬಗ್ಗೆ ವಿಚಾರಿಸಲು ನಾನು ವೃತ್ತಾಧಿಕಾರಿಯನ್ನು ಕಳುಹಿಸಿದ್ದೇನೆ. ಅವರು ಬಂಧಿತನನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು. ಪೊಲೀಸರು ಅಪರಾಧದಲ್ಲಿ ಭಾಗಿಯಾಗಿರುವುದು ದೃಢಪಟ್ಟ ನಂತರ ಅವರನ್ನು ಅಮಾನತು ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸಧ್ಯ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದರು.

ಆರೋಪಿತ ಮೂವರು ಪೊಲೀಸರ ವಿರುದ್ಧ ಅಕ್ರಮ ಪ್ರವೇಶ, ಅಪಹರಣ, ಅಕ್ರಮ ಬಂಧನ, ಬೆದರಿಕೆ ಮತ್ತು ಬೆಲೆಬಾಳುವ ವಸ್ತುಗಳಿಗೆ ಬೇಡಿಕೆ, ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು, ಕ್ರಿಮಿನಲ್ ಬೆದರಿಕೆ ಮತ್ತು ಉದ್ದೇಶಪೂರ್ವಕ ಅವಮಾನ ಸೇರಿದಂತೆ ಕ್ರಿಮಿನಲ್ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News