1999ರ ತೂತ್ತುಕುಡಿ ಲಾಕಪ್ ಡೆತ್ ಪ್ರಕರಣ | ಡಿಎಸ್‌ಪಿ ಸೇರಿದಂತೆ ಒಂಭತ್ತು ಜನರಿಗೆ ಜೀವಾವಧಿ ಶಿಕ್ಷೆ

ಸಾಂದರ್ಭಿಕ ಚಿತ್ರ | PC : freepik.com
ಮದುರೈ: ತೂತ್ತುಕುಡಿ ಜಿಲ್ಲಾ ನ್ಯಾಯಾಲಯವು 1999ರಲ್ಲಿ ಜಿಲ್ಲೆಯ ಥಲಮುತ್ತು ನಗರ ಪೋಲಿಸ್ ಠಾಣೆಯಲ್ಲಿ ವ್ಯಕ್ತಿಯೋರ್ವನ ಕಸ್ಟಡಿ ಸಾವಿಗೆ ಸಂಬಂಧಿಸಿದಂತೆ ಹಾಲಿ ಡಿಎಸ್‌ಪಿಯೋರ್ವರು ಸೇರಿದಂತೆ ಒಂಭತ್ತು ಜನರನ್ನು ತಪ್ಪಿತಸ್ಥರೆಂದು ಘೋಷಿಸಿದ್ದು,ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ ತೂತ್ತುಕುಡಿ ಜಿಲ್ಲೆಯ ಅಲಂಗರಥಟ್ಟು ನಿವಾಸಿ ವಿನ್ಸೆಂಟ್ ಎಂಬ ವ್ಯಕ್ತಿಯನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಥಲಮುತ್ತು ಪೋಲಿಸ್ ಠಾಣೆಗೆ ಕರೆದೊಯ್ಯಲಾಗಿತ್ತು. ವಿನ್ಸೆಂಟ್ ಕಸ್ಟಡಿಯಲ್ಲಿರುವಾಗಲೇ ಶಂಕಾಸ್ಪದವಾಗಿ ಮೃತಪಟ್ಟಿದ್ದರು. ಪೋಲಿಸ್ ಸಿಬ್ಬಂದಿಗಳು ಕಸ್ಟಡಿಯಲ್ಲಿ ನೀಡಿದ್ದ ಚಿತ್ರಹಿಂಸೆಯಿಂದಾಗಿ ತನ್ನ ಪತಿ ಮೃತಪಟ್ಟಿರುವುದಾಗಿ ಆರೋಪಿಸಿ ವಿನ್ಸೆಂಟ್ ಪತ್ನಿ ಕೃಷ್ಣಮ್ಮಾಳ್ ಅಧಿಕಾರಿಗಳಿಗೆ ಅಹವಾಲು ಸಲ್ಲಿಸಿದ್ದರು.
ಕರ್ತವ್ಯದಲ್ಲಿದ್ದ ಎಲ್ಲ ಪೋಲಿಸ್ ಸಿಬ್ಬಂದಿಗಳಿಂದ ಕ್ರೂರ ದಾಳಿ ಮತ್ತು ಚಿತ್ರಹಿಂಸೆ ವಿನ್ಸೆಂಟ್ ಸಾವಿಗೆ ಕಾರಣವಾಗಿತ್ತು ಎಂದು ತನ್ನ ವರದಿಯಲ್ಲಿ ದೃಢಪಡಿಸಿದ್ದ ಕಂದಾಯ ವಿಭಾಗೀಯ ಅಧಿಕಾರಿಗಳು ಈ ಬಗ್ಗೆ ದೂರು ದಾಖಲಿಸಿದ್ದರು.
ಪ್ರಕರಣವು 2006ರಲ್ಲಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಸೋಮಸುಂದರಂ(ಪ್ರಸ್ತುತ ಪೋಲಿಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ), ಜಯಶೇಖರನ್, ಜೋಸೆಫ್‌ರಾಜ್, ಪಿಚ್ಚಯ್ಯ, ಚೆಲ್ಲದುರೈ, ವೀರಬಾಹು, ಶಿವಸುಬ್ರಮಣಿಯನ್, ಸುಬ್ಬಯ್ಯ, ರತಿನಸಾಮಿ, ಬಾಲಸುಬ್ರಮಣಿಯನ್ ಮತ್ತು ರಾಮಕೃಷ್ಣ(ಪ್ರಸ್ತುತ ಡಿಎಸ್‌ಪಿಯಾಗಿದ್ದಾರೆ) ಅವರು ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ ವಿನ್ಸೆಂಟ್ ಸಾವು 1999, ಸೆ.18ರಂದು ಮಧ್ಯಾಹ್ನ 1:30ರಿಂದ ಸಂಜೆ 7:30ರ ನಡುವೆ ಸಂಭವಿಸಿತ್ತು. ವಿನ್ಸೆಂಟ್ ಮುನ್ನಾದಿನ ತೀವ್ರವಾಗಿ ಗಾಯಗೊಂಡಿದ್ದರು ಎಂದು ವೈದ್ಯಕೀಯ ಸಾಕ್ಷ್ಯವು ದೃಢಪಡಿಸಿದೆ. ಹೀಗಾಗಿ ಇದು ಕಸ್ಟಡಿ ಸಾವು ಅಲ್ಲದೆ ಬೇರೇನೂ ಅಲ್ಲ ಎಂದು ಶನಿವಾರ ವಿಚಾರಣೆ ಸಂದರ್ಭದಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ತಾಂಡವನ್ ಹೇಳಿದರು.
ಕಸ್ಟಡಿಯಲ್ಲಿ ಸಾವು ಸಂಭವಿಸಿದಾಗ ಅದು ಕಸ್ಟಡಿ ಸಾವು ಅಲ್ಲ ಎಂದು ಸಾಬೀತಾಗುವವರೆಗೂ ಪೋಲಿಸರ ಮೇಲೆಯೇ ಶಂಕೆಯಿರುತ್ತದೆ. ಇಲ್ಲಿ ಆರೋಪಿ ಪೋಲಿಸರು ಅದು ಕಸ್ಟಡಿ ಸಾವು ಅಲ್ಲ ಎಂದು ಸಾಬೀತುಗೊಳಿಸಿಲ್ಲ. ಹೀಗಾಗಿ ಇದು ಕಸ್ಟಡಿ ಸಾವು ಎಂದು ಭಾವಿಸಲೇಬೇಕು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.
ಪೋಲಿಸರು ಲಾಠಿಗಳಿಂದ ವಿನ್ಸೆಂಟ್ ರನ್ನು ಥಳಿಸಿದ್ದರು ಎನ್ನುವುದನ್ನು ಸಾಕ್ಷ್ಯಾಧಾರಗಳು ಸ್ಪಷ್ಟಪಡಿಸಿವೆ. ತಮ್ಮ ಹಲ್ಲೆಯಿಂದ ಆತ ಸಾಯಬಹುದು ಎನ್ನುವುದು ಗೊತ್ತಿದ್ದರೂ ಪೋಲಿಸರು ಅವರ ಮೇಲೆ ದಾಳಿ ನಡೆಸಿದ್ದರು ಎಂದೂ ನ್ಯಾ.ತಾಂಡವನ್ ತೀರ್ಪಿನಲ್ಲಿ ಹೇಳಿದ್ದಾರೆ.
ಶಿವಸುಬ್ರಮಣಿಯನ್ ಮತ್ತು ರತಿನಸಾಮಿ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದ ನ್ಯಾಯಾಧೀಶರು ಉಳಿದವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 10,000 ರೂ.ಗಳ ದಂಡವನ್ನು ವಿಧಿಸಿದರು.