ವಕ್ಫ್ ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಎಪಿಸಿಆರ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ವಕ್ಫ್ ತಿದ್ದುಪಡಿ ಮಸೂದೆ-2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಎನ್‌ಜಿಒ ಅಸೋಸಿಯೇಷನ್ ಫಾರ್ ದಿ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ವಕೀಲರಾದ ಅದೀಲ್ ಅಹ್ಮದ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ, ಈ ಮಸೂದೆಯು ಸಂವಿಧಾನದ 14, 25, 26 ಮತ್ತು 300ಎ ವಿಧಿಗಳನ್ನು ನೇರವಾಗಿ ಉಲ್ಲಂಘಿಸುತ್ತದೆ. ಇದಲ್ಲದೆ ನಮ್ಮ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಚೌಕಟ್ಟಿನ ತಳಹದಿಯನ್ನು ರೂಪಿಸುವ ಪೂರ್ವಭಾವಿ ಮೌಲ್ಯಗಳನ್ನು ಉಲ್ಲಂಘಿಸುತ್ತದೆ. UMEED ಮಸೂದೆಯು ಅನಗತ್ಯ ಮಾತ್ರವಲ್ಲ. ಮುಸ್ಲಿಂ ಸಮುದಾಯದ ಧಾರ್ಮಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪವನ್ನು ಮಾಡುತ್ತದೆ. ಪ್ರವಾದಿ ಮುಹಮ್ಮದ್ ಅವರ ಕಾಲದಿಂದಲೂ ಕುರ್‌ಆನ್ ಮತ್ತು ಹದೀಸ್‌ನಲ್ಲಿ ಉಲ್ಲೇಖಿಸಿರುವ ವಕ್ಫ್‌ನ ಮೂಲಭೂತ ಉದ್ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತರಾತುರಿಯಲ್ಲಿ ಅಂಗೀಕರಿಸಿದ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದರು. ಆದರೆ, ಮಸೂದೆಯ ನಿಬಂಧನೆಗಳು ವಕ್ಫ್ ಮಂಡಳಿಯ ಸ್ವಾಯತ್ತತೆ ಮತ್ತು ಪರಿಣಾಮಕಾರಿತ್ವಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತವೆ. ವಿಶೇಷವಾಗಿ, ಸೆಕ್ಷನ್ 40ರ ಅಳವಡಿಕೆಯ ಮೂಲಕ ಪೋಷಕ ಕಾಯಿದೆಯಲ್ಲಿ ಪ್ರತಿಪಾದಿಸಲಾದ ನೈಸರ್ಗಿಕ ನ್ಯಾಯದ ತತ್ವಗಳನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ನೂತನ ತಿದ್ದುಪಡಿ ಕಾಯಿದೆಯು ವಕ್ಫ್ ಆಸ್ತಿಗಳಿಗೆ ನೀಡಲಾದ ಕಾನೂನು ಮಾನ್ಯತೆಯನ್ನು ಉದ್ದೇಶಪೂರ್ವಕವಾಗಿ ದುರ್ಬಲಗೊಳಿಸುತ್ತದೆ. ವಕ್ಫ್ ತಿದ್ದುಪಡಿ ಮಸೂದೆ- 2025 ಅಸಂವಿಧಾನಿಕ ಮತ್ತು ನ್ಯಾಯಸಮ್ಮತವಾಗಿಲ್ಲ. ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳು, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾಯತ್ತತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಕಾಯಿದೆಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಅಸಂವಿಧಾನಿಕ ಎಂದು ಘೋಷಿಸಬೇಕು. ಮಸೂದೆಯು ಸಂವಿಧಾನದ 14, 15, 21, 25, 26, 29, 30 ಮತ್ತು 300-ಎ ಅನುಚ್ಛೇದಗಳನ್ನು ಉಲ್ಲಂಘಿಸುತ್ತಿದೆ. ವಕ್ಫ್ ಆಸ್ತಿಗಳು ಮತ್ತು ಅವುಗಳ ನಿರ್ವಹಣೆಯ ಮೇಲೆ ಮಸೂದೆಯು ನಿರ್ಬಂಧಗಳನ್ನು ವಿಧಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.