ಜೈನರ, ಬೌದ್ಧರ, ಕ್ರಿಶ್ಚಿಯನ್ನರ ಭೂಮಿ, ಹಿಂದೂಗಳ ದೇಗುಲಗಳ ಮೇಲೆ ಬಿಜೆಪಿ ಕಣ್ಣು: ಉದ್ಧವ್ ಠಾಕ್ರೆ

ಉದ್ಧವ್ ಠಾಕ್ರೆ | PC : PTI
ಮುಂಬೈ: ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದ ಬಳಿಕ ಬಿಜೆಪಿ ಈಗ ತಮ್ಮ ಗೆಳೆಯರಿಗಾಗಿ ಜೈನರ, ಬೌದ್ಧರ, ಕ್ರಿಶ್ಚಿಯನ್ನರ ಭೂಮಿ ಹಾಗೂ ಹಿಂದೂಗಳ ದೇಗುಲಗಳ ಮೇಲೆ ಕಣ್ಣಿರಿಸಿದೆ ಎಂದು ಶಿವನೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಮುಖವಾಣಿಯಾಗಿರುವ ‘ಆರ್ಗನೈಸರ್’ನಲ್ಲಿ ಪ್ರಕಟವಾಗಿದ್ದ ಲೇಖನವನ್ನು ಉಲ್ಲೇಖಿಸಿ ಇದೇ ರೀತಿಯ ಆರೋಪವನ್ನು ಎನ್‌ಸಿಪಿ (ಎಸ್‌ಪಿ) ನಾಯಕ ಜಿತೇಂದ್ರ ಅವದ್ ಕೂಡ ಮಾಡಿದ್ದಾರೆ.
ಶ್ರೀರಾಮನಂತೆ ವರ್ತಿಸಿ ಎಂದು ಠಾಕ್ರೆ ಅವರು ರವಿವಾರ ತನ್ನ 45ನೇ ಸ್ಥಾಪನಾ ದಿನ ಆಚರಿಸಿಕೊಂಡ ಬಿಜೆಪಿಗೆ ಸಲಹೆ ನೀಡಿದ್ದಾರೆ.
ಬಿಜೆಪಿಯವರು ಮುಂದಿನ ಹೆಜ್ಜೆ (ವಕ್ಫ್ ಕಾಯ್ದೆ ಬಳಿಕ)ಯಾಗಿ ಜೈನರ, ಬೌದ್ಧರ, ಕ್ರಿಶ್ಚಿಯನ್ನರ ಭೂಮಿ ಹಾಗೂ ಹಿಂದೂಗಳ ದೇಗುಲಗಳ ಮೇಲೆ ಕಣ್ಣಿರಿಸಿದ್ದಾರೆ. ಅವರು ತಮ್ಮ ಗೆಳೆಯರಿಗೆ ಉತ್ತಮ ಭೂಮಿ ನೀಡಲಿದ್ದಾರೆ. ಅವರಿಗೆ ಯಾವುದೇ ಸಮುದಾಯದ ಕುರಿತು ಪ್ರೀತಿ ಇಲ್ಲ ಎಂದು ಅವರು ಹೇಳಿದ್ದಾರೆ.
ಅವರು ಇದನ್ನು ಬಹಿರಂಗಪಡಿಸಿದ್ದಾರೆ. ಆದುದರಿಂದ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ‘ಆರ್ಗನೈಸರ್’ನಲ್ಲಿ ಪ್ರಕಟವಾಗಿದ್ದ ಲೇಖನವನ್ನು ಉಲ್ಲೇಖಿಸಿ ಅವರು ತಿಳಿಸಿದ್ದಾರೆ.
ಪಕ್ಷದ ಐಟಿ ಹಾಗೂ ಸಂವಹನ ಘಟಕ ಶಿವ ಸಂಚಾರ್ ಸೇನಾವನ್ನು ಉದ್ಘಾಟಿಸಿದ ಸಂದರ್ಭ ಠಾಕ್ರೆ ಅವರು ಮಾತನಾಡಿದರು.
ವಕ್ಫ್ ಕಾಯ್ದೆ ವಿರುದ್ಧ ಇತರ ಪ್ರತಿಪಕ್ಷಗಳಂತೆ ಶಿವಸೇನಾ ನ್ಯಾಯಾಲಯವನ್ನು ಸಂಪರ್ಕಿಸಲಿದೆಯೇ ಎಂಬ ಪ್ರಶ್ನೆಗೆ ಠಾಕ್ರೆ ಅವರು ‘ಇಲ್ಲ’ ಎಂದು ಹೇಳಿದರು.