ತಮಿಳುನಾಡು ಬಿಜೆಪಿ ಮುಖ್ಯಸ್ಥ ಹುದ್ದೆಯಿಂದ ಅಣ್ಣಾಮಲೈ ನಿರ್ಗಮನ?

Photo : PTI
ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ನಡುವಿನ ಮೈತ್ರಿ ಮಾತುಕತೆ ಬಿರುಸುಗೊಂಡಿದ್ದು, ಇದರ ಬೆನ್ನಿಗೇ, 2023ರಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಮುರಿದು ಬೀಳಲು ಪ್ರಮುಖ ಕಾರಣವಾಗಿದ್ದ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ.ಅಣ್ಣಾಮಲೈ ತಮ್ಮ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ, ಇದು ಅಣ್ಣಾಮಲೈಗೆ ನೀಡುತ್ತಿರುವ ಶಿಕ್ಷೆಯಲ್ಲ, ಬದಲಿಗೆ, ಜಾತಿ ಸಮತೋಲನಕ್ಕಾಗಿ ಮಾಡುತ್ತಿರುವ ಬದಲಾವಣೆ ಎಂದು ಬಿಜೆಪಿ ಮೂಲಗಳು ಸ್ಪಷ್ಟನೆ ನೀಡಿವೆ.
2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಒಟ್ಟಾಗಿ ಸ್ಪರ್ಧಿಸಬೇಕಿದ್ದರೆ, ಎಐಎಡಿಎಂಕೆ ಹಾಗೂ ಬಿಜೆಪಿ ನಾಯಕತ್ವದ ಮುಖಗಳೆರಡೂ ಗೌಂಡರ್ ಜಾತಿಯದ್ದಾಗಿರಬಾರದು ಎಂದು ಬಿಜೆಪಿ ಬಯಸುತ್ತಿದೆ. ಅಣ್ಣಾಮಲೈರಂತೆಯೇ, ಎಐಎಡಿಎಂಕೆ ಮುಖ್ಯಸ್ಥ ಕೆ.ಪಳನಿಸ್ವಾಮಿ ಕೂಡಾ ಬಲಿಷ್ಠ ಹಿಂದುಳಿದ ಗೌಂಡರ್ ಸಮುದಾಯಕ್ಕೆ ಸೇರಿದ್ದು, ಗೌಂಡರ್ ಸಮುದಾಯದ ಪ್ರಾಬಲ್ಯ ಹೊಂದಿರುವ ಪಶ್ಚಿಮ ಕೊಂಗು ಪ್ರಾಂತ್ಯಕ್ಕೂ ಸೇರಿದವರಾಗಿದ್ದಾರೆ.
ಬಿಜೆಪಿ ಮತ್ತು ಎಐಎಡಿಎಂಕೆ ಪಕ್ಷಗಳ ಮರುಮೈತ್ರಿಯ ಪ್ರಪ್ರಥಮ ಔಪಚಾರಿಕ ನಡೆಯ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪಳನಿಸ್ವಾಮಿ ನಡುವೆ ದಿಲ್ಲಿಯಲ್ಲಿ ಸಭೆ ನಡೆದ ಕೂಡಲೇ, ಈ ವಿಷಯವನ್ನು ಅಣ್ಣಾಮಲೈಗೆ ತಿಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಇಲ್ಲಿಯವರೆಗೆ ತಮಿಳುನಾಡಿನಲ್ಲಿ ರಾಜಕೀಯ ಯಶಸ್ಸು ಸಾಧಿಸಲು ಸಾಧ್ಯವಾಗದಿದ್ದರೂ, ರಾಜ್ಯದ ಸಮಸ್ಯೆಗಳ ಕುರಿತು ಆಕ್ರಮಣಕಾರಿ ನಿಲುವು ಪ್ರದರ್ಶಿಸುತ್ತಾ ಬಂದಿರುವ ಅಣ್ಣಾಮಲೈಗೆ, “ದಿಲ್ಲಿಯು ನಿಮ್ಮ ಉಜ್ವಲ ಭವಿಷ್ಯವನ್ನು ಎದುರು ನೋಡುತ್ತಿದೆ” ಎಂದು ಕೇಂದ್ರ ಬಿಜೆಪಿ ನಾಯಕತ್ವ ಹೇಳುತ್ತಾ ಬಂದಿತ್ತು. ಆದರೆ, ಇದೀಗ ಪಕ್ಷದ ಕಾರ್ಯತಂತ್ರದ ಬಗ್ಗೆ ಅಣ್ಣಾಮಲೈ ವಿಶ್ವಾಸವಿಡಬೇಕು ಹಾಗೂ ಅದನ್ನು ಪಾಲಿಸಬೇಕು ಎಂದು ಬಿಜೆಪಿ ನಾಯಕತ್ವ ಸೂಚನೆ ನೀಡಿದೆ.
ಇದರ ಬೆನ್ನಿಗೇ, ಅಣ್ಣಾಮಲೈ ಪಕ್ಷಕ್ಕೆ ಸಂಪೂರ್ಣ ನಿಷ್ಠೆ ಪ್ರದರ್ಶಿಸಿದ್ದಾರೆ ಎಂದು ಹೇಳಲಾಗಿದ್ದು, “ಪಕ್ಷದ ಬಗೆಗಿನ ಬದ್ಧತೆಯ ಕುರಿತು ನನ್ನಲ್ಲಿ ಎರಡನೆ ಯೋಚನೆಯಿಲ್ಲ ಹಾಗೂ ನಾನು ಸಾಮಾನ್ಯ ಕಾರ್ಯಕರ್ತನಾಗಿಯೂ ಕೆಲಸ ಮಾಡಲು ಸಿದ್ಧ ಎಂದು ಅಣ್ಣಾಮಲೈ ಹೇಳಿದ್ದಾರೆ” ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ರವಿವಾರ ಕೊಯಂಬತ್ತೂರಿನಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, “ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎಐಎಡಿಎಂಕೆ-ಬಿಜೆಪಿ ಮೈತ್ರಿ ಕುರಿತು ಮಾತನಾಡಿದ್ದಾರೆ. ಅವರ ಮಾತುಗಳನ್ನೇ ನೀವು ಪಕ್ಷದ ಅಂತಿಮ ನಿಲುವು ಎಂದು ಭಾವಿಸಬಹುದು” ಎಂದು ಎಐಎಡಿಎಂಕೆ-ಬಿಜೆಪಿ ಮೈತ್ರಿ ಕುರಿತ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ.
ಪಳನಿಸ್ವಾಮಿಯೊಂದಿಗಿನ ಅಮಿತ್ ಶಾ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, “ಅದರಲ್ಲಿ ಯಾವುದೇ ತಪ್ಪಿಲ್ಲ. ಬಿಜೆಪಿ ನಾಯಕರು ಯಾವುದೇ ಪಕ್ಷದ ನಾಯಕರನ್ನು ಗುಟ್ಟಾಗಿ ಭೇಟಿ ಮಾಡಬೇಕಾದ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಸೌಜನ್ಯ: indianexpress.com