ಬಿಹಾರ | ವಾಮಾಚಾರಕ್ಕಾಗಿ ವೃದ್ಧನ ತಲೆ ಕಡಿದು ಮುಂಡವನ್ನು ಸುಟ್ಟ ದುಷ್ಕರ್ಮಿಗಳು

Update: 2025-03-29 20:21 IST
ಬಿಹಾರ | ವಾಮಾಚಾರಕ್ಕಾಗಿ ವೃದ್ಧನ ತಲೆ ಕಡಿದು ಮುಂಡವನ್ನು ಸುಟ್ಟ ದುಷ್ಕರ್ಮಿಗಳು

ಸಾಂದರ್ಭಿಕ ಚಿತ್ರ

  • whatsapp icon

ಔರಂಗಾಬಾದ್: ವಾಮಾಚಾರಕ್ಕಾಗಿ 65 ವರ್ಷ ಪ್ರಾಯದ ವ್ಯಕ್ತಿಯನ್ನು ಕೊಂದು ಮುಂಡವನ್ನು ‘ಹೋಳಿ ದಹನ’ದ ಬೆಂಕಿಯಲ್ಲಿ ಸುಟ್ಟಿರುವ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಯುಗುಲ್ ಯಾದವ್ ಎಂದು ಗುರುತಿಸಲಾಗಿದೆ ಎಂದು ಪೋಲಿಸರು ತಿಳಿಸಿದರು. ಘಟನೆಗೆ ಸಂಬಂಧಿಸಿದಂತೆ ಸದ್ಯ ತಲೆಮರೆಸಿಕೊಂಡಿರುವ ವಾಮಾಚಾರಿಯ ಸಂಬಂಧಿ ಸೇರಿದಂತೆ ನಾಲ್ವರನ್ನು ಪೋಲಿಸರು ಬಂಧಿಸಿದ್ದಾರೆ.

ಗುಲಾಬ್ ಬಿಘಾ ಗ್ರಾಮದ ಯುಗುಲ್ ಯಾದವ್ ಕಾಣೆಯಾಗಿರುವ ಬಗ್ಗೆ ಮಾ.13ರಂದು ದೂರು ದಾಖಲಾಗಿತ್ತು. ಆತನ ಪತ್ತೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖೆಯ ಸಮಯದಲ್ಲಿ ಅಧಿಕಾರಿಗಳಿಗೆ ನೆರೆಯ ಬಂಗೇರ್ ಗ್ರಾಮದಲ್ಲಿ ಹೋಳಿ ದಹನದ ಬೂದಿಯಲ್ಲಿ ಮಾನವ ಮೂಳೆಗಳು ಪತ್ತೆಯಾಗಿರುವ ಮಾಹಿತಿ ಲಭಿಸಿತ್ತು. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ಸುಟ್ಟು ಕರಕಲಾಗಿದ್ದ ಮಾನವ ಮೂಳೆಗಳು ಮತ್ತು ಯುಗುಲ್‌ ನ ಚಪ್ಪಲಿಗಳು ಕಂಡು ಬಂದಿದ್ದವು. ತಕ್ಷಣವೇ ಪೋಲಿಸ್ ಶ್ವಾನವನ್ನು ನಿಯೋಜಿಸಲಾಗಿದ್ದು, ಅದು ತನಿಖಾಧಿಕಾರಿಗಳನ್ನು ವಾಮಾಚಾರಿ ರಾಮಶಿಷ್ ರಿಕ್ಯಾಸನ್ ಮನೆಗೆ ಕರೆದೊಯ್ದಿತ್ತು. ಈ ವೇಳೆ ರಾಮಶಿಷ್ ಮನೆಯಲ್ಲಿರಲಿಲ್ಲ,ಆತನ ಇರುವಿಕೆಯ ಬಗ್ಗೆ ಅಲ್ಲಿದ್ದ ಸಂಬಂಧಿ ಧರ್ಮೇಂದ್ರ ಎಂಬಾತ ವಿರೋಧಾಭಾಸದ ಹೇಳಿಕೆಗಳನ್ನು ನೀಡಿದ್ದರಿಂದ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂದು ಔರಂಗಾಬಾದ್ ಎಸ್‌ಪಿ ಅಂಬರೀಶ ರಾಹುಲ್ ಸುದ್ದಿಗಾರರಿಗೆ ತಿಳಿಸಿದರು.

ತಾನು ಮತ್ತು ಇತರರು ಸೇರಿಕೊಂಡು ಯುಗುಲ್‌ ನನ್ನು ಅಪಹರಿಸಿದ್ದು, ವಾಮಾಚಾರ ವಿಧಿಗಳಿಗಾಗಿ ಆತನ ಶಿರಶ್ಛೇದನ ಮಾಡಿದ್ದನ್ನು ಧರ್ಮೇಂದ್ರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಯುಗುಲ್‌ ನ ಮುಂಡವನ್ನು ಹೋಳಿ ದಹನದ ಬೆಂಕಿಯಲ್ಲಿ ಸುಡಲಾಗಿತ್ತು. ಧರ್ಮೇಂದ್ರನ ಹೇಳಿಕೆಯ ಆಧಾರದಲ್ಲಿ ಪೋಲಿಸರು ಯುಗುಲ್‌ ನ ರುಂಡವನ್ನು ಸಮೀಪದ ಗದ್ದೆಯೊಂದರಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದ ಎಸ್‌ಪಿ, ಮಗುವನ್ನು ಬಯಸಿದ್ದ ಸುಧೀರ್ ಪಾಸ್ವಾನ್ ಎಂಬಾತನಿಗಾಗಿ ರಾಮಶಿಷ್ ವಾಮಾಚರ ವಿಧಿಯನ್ನು ನಡೆಸಿದ್ದ. ಈ ಹಿಂದೆ ಹದಿಹರೆಯದ ಬಾಲಕನೋರ್ವನನ್ನು ಬಲಿ ನೀಡಿ, ಶವವನ್ನು ಅದೇ ಪ್ರದೇಶದಲ್ಲಿಯ ಬಾವಿಯಲ್ಲಿ ಎಸೆದಿದ್ದನ್ನೂ ಧರ್ಮೇಂದ್ರ ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು.

ಸುಧೀರ್ ಪಾಸ್ವಾನ್,ಧರ್ಮೇಂದ್ರ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕ ಬಾಲಕನೋರ್ವನನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಅಪರಾಧಕ್ಕೆ ಬಳಸಲಾಗಿದ್ದ ಆಯುಧವನ್ನು ವಶಪಡಿಸಿಕೊಂಡಿರುವ ಪೋಲೀಸರು ಪತ್ತೆಯಾಗಿರುವ ಮಾನವ ಮೂಳೆಗಳನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದ್ದಾರೆ. ವಾಮಾಚಾರಿ ರಾಮಶಿಷ್‌ ನ ಬಂಧನಕ್ಕಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಎಸ್‌ಪಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News