ಅತ್ಯಾಚಾರ ಪ್ರಕರಣ:‘ಸ್ವಘೋಷಿತ ಕ್ರೈಸ್ತ ಪಾದ್ರಿʼ ಬಜಿಂದರ್ ಸಿಂಗ್‌ ಗೆ ಜೀವಾವಧಿ ಶಿಕ್ಷೆ

Update: 2025-04-01 20:56 IST
Pastor Bajinder Singh

ಬಜಿಂದರ್ ಸಿಂಗ್‌ | Credit: Instagram/prophetbajindersingh_ministry

  • whatsapp icon

ಚಂಡಿಗಡ: ಪಂಜಾಬಿನ ಮೊಹಾಲಿ ನ್ಯಾಯಾಲಯವು 2018ರ ಅತ್ಯಾಚಾರ ಪ್ರಕರಣದಲ್ಲಿ ಸ್ವಘೋಷಿತ ಬೋಧಕ ಪಾದ್ರಿ ಬಜಿಂದರ್ ಸಿಂಗ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ‘ಯೇಶು ಯೇಶು ಪ್ರವಾದಿ’ ಎಂದೇ ಜನಪ್ರಿಯನಾಗಿರುವ ಸಿಂಗ್(42) ದೋಷಿ ಎಂದು ನ್ಯಾಯಾಲಯವು ಘೋಷಿಸಿದ ಬಳಿಕ ಆತನನ್ನು ಜೈಲಿನಲ್ಲಿರಿಸಲಾಗಿತ್ತು.

ಸಂತ್ರಸ್ತ ಮಹಿಳೆಯು 2018ರಲ್ಲಿ ಝಿರ್ಕಾಪುರ ಪೋಲಿಸ್ ಠಾಣೆಯಲ್ಲಿ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ತನ್ನನ್ನು ವಿದೇಶಕ್ಕೆ ಕರೆದೊಯ್ಯುವುದಾಗಿ ಆಮಿಷವೊಡ್ಡಿದ್ದ ಸಿಂಗ್ ಮೊಹಾಲಿಯಲ್ಲಿನ ಆತನ ನಿವಾಸದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದ ಮತ್ತು ಅದರ ವೀಡಿಯೊ ಮಾಡಿದ್ದ. ತಾನು ಆತನ ಬೇಡಿಕೆಗಳನ್ನು ಒಪ್ಪದಿದ್ದರೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಳು.

ಪ್ರಕರಣದಲ್ಲಿಯ ಇತರ ಐದು ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.

ಸಿಂಗ್ ತನ್ನ ಕಚೇರಿಯಲ್ಲಿ ಮಹಿಳೆಯೋರ್ವರ ಮೇಲೆ ಹಲ್ಲೆ ನಡೆಸಿದ್ದ ವೀಡಿಯೊ ವೈರಲ್ ಆದ ಬಳಿಕ ಈ ತಿಂಗಳ ಆರಂಭದಲ್ಲಿ ಮೊಹಾಲಿ ಪೋಲಿಸರು ಆತನ ವಿರುದ್ಧ ಪ್ರತ್ಯೇಕ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ವೀಡಿಯೊದಲ್ಲಿಯ ಘಟನೆ ಫೆ.14ರಂದು ನಡೆದಿತ್ತು ಎನ್ನಲಾಗಿದೆ.

ಇದರ ಜೊತೆಗೆ 22ರ ಹರೆಯದ ಮಹಿಳೆಯೋರ್ವಳು ಫೆ.28ರಂದು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿಯೂ ಸಿಂಗ್ ವಿಶೇಷ ತನಿಖಾ ತಂಡದಿಂದ ತನಿಖೆಯನ್ನು ಎದುರಿಸುತ್ತಿದ್ದಾನೆ.

2012ರಲ್ಲಿ ಬೋಧಕನಾಗಿದ್ದ ಸಿಂಗ್ ನಡೆಸುವ ಸಮಾವೇಶಗಳಿಗೆ ಪವಾಡಗಳ ಮೂಲಕ ತಮ್ಮ ಅನಾರೋಗ್ಯವನ್ನು ಗುಣಪಡಿಸಿಕೊಳ್ಳಲು ಬಯಸುವ ಭಾರೀ ಸಂಖ್ಯೆಯ ಅನುಯಾಯಿಗಳು ಪಾಲ್ಗೊಳ್ಳುತ್ತಿದ್ದರು. ಆತ ಜಲಂಧರ್‌ ನ ತಾಜ್‌ ಪುರದಲ್ಲಿ ಎರಡು ಮತ್ತು ಮೊಹಾಲಿಯ ಮಜ್ರಿಯಲ್ಲಿ ಒಂದು ಚರ್ಚ್‌ಗಳನ್ನು ನಡೆಸುತ್ತಿದ್ದಾನೆ. ಆದರೆ ಆತನ ಚರ್ಚ್ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಹಲವಾರು ಶಾಖೆಗಳನ್ನು ಹೊಂದಿದೆ ಎಂದು ಆತನ ಬೆಂಬಲಿಗರು ಹೇಳಿಕೊಳ್ಳುತ್ತಿದ್ದಾರೆ. ಆತನ ‘ಪ್ರವಾದಿ ಬಜಿಂದರ್ ಸಿಂಗ್’ ಹೆಸರಿನ ಯೂಟ್ಯೂಬ್ ಚಾನೆಲ್ 37.40 ಲಕ್ಷಕ್ಕೂ ಅಧಿಕ ಸಬ್‌ ಸ್ಕ್ರೈಬರ್‌ಗಳನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News