ಎಪ್ರಿಲ್ ಅಂತ್ಯದ ವೇಳೆಗೆ ಬಿಜೆಪಿಗೆ ನೂತನ ಅಧ್ಯಕ್ಷರ ನೇಮಕ ಸಾಧ್ಯತೆ

ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಕಳೆದ ಹತ್ತು ತಿಂಗಳುಗಳಿಂದಲೂ ಬಾಕಿಯಿರುವ ಆಡಳಿತಾರೂಢ ಬಿಜೆಪಿಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಪ್ರಸಕ್ತ ಸಂಸತ್ ಅಧಿವೇಶನ ಮುಗಿದ ತಕ್ಷಣ ಆರಂಭಗೊಳ್ಳಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಚುನಾವಣಾ ಪ್ರಕ್ರಿಯೆಗೆ ಸಿದ್ಧತೆಗಳು ಆರಂಭಗೊಂಡಿದ್ದವು ಮತ್ತು ಮಾ.31ರೊಳಗೆ ಮುಗಿಯಬೇಕಿತ್ತು, ಆದರೆ ಸಂಸತ್ ಅಧಿವೇಶನದಿಂದಾಗಿ ಇನ್ನಷ್ಟು ವಿಳಂಬಗೊಂಡಿದೆ.
13 ರಾಜ್ಯಗಳಲ್ಲಿ ಸಾಂಸ್ಥಿಕ ಚುನಾವಣೆಗಳು ಪೂರ್ಣಗೊಂಡ ಬಳಿಕ ಆಯಾ ರಾಜ್ಯ ಅಧ್ಯಕ್ಷರ ಹೆಸರುಗಳನ್ನು ಪ್ರಕಟಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಉತ್ತರ ಪ್ರದೇಶ,ಕರ್ನಾಟಕ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಬಾಕಿಯುಳಿದಿರುವ ಹೆಚ್ಚಿನ ರಾಜ್ಯಗಳ ಬಿಜೆಪಿ ಅಧ್ಯಕ್ಷರ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದೂ ಮೂಲಗಳು ತಿಳಿಸಿದವು.
19 ರಾಜ್ಯ ಬಿಜೆಪಿ ಅಧ್ಯಕ್ಷರ ಹೆಸರುಗಳನ್ನು ಪ್ರಕಟಿಸಿದ ಬಳಿಕ ಪಕ್ಷದ ಮುಂದಿನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗಾಗಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಮುನ್ನ ಶೇ.50ರಷ್ಟು ರಾಜ್ಯಗಳಲ್ಲಿ ಸಾಂಸ್ಥಿಕ ಚುನಾವಣೆಗಳನ್ನು ನಡೆಸುವುದು ಕಡ್ಡಾಯವಾಗಿದೆ. ಅದಕ್ಕೂ ಮುನ್ನ ಬೂತ್,ಮಂಡಲ ಮತ್ತು ಜಿಲ್ಲಾ ಮಟ್ಟಗಳಲ್ಲಿ ಚುನಾವಣೆಗಳು ನಡೆಯುತ್ತವೆ.
ಜೆ.ಪಿ.ನಡ್ಡಾ ಅವರು 2019ರಲ್ಲಿ ಬಿಜೆಪಿಯ ಕಾರ್ಯಾಧ್ಯಕ್ಷರಾಗಿ ನೇಮಕಗೊಳ್ಳುವ ಮೂಲಕ ಪಕ್ಷದ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದರು. ಜನವರಿ 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದ ಅವರು ಹಾಲಿ ಗೃಹಸಚಿವ ಅಮಿತ್ ಶಾ ಅವರಿಂದ ಅಧಿಕಾರವನ್ನು ಸ್ವೀಕರಿಸಿದ್ದರು. ಲೋಕಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಅವರ ಅಧಿಕಾರಾವಧಿಯನ್ನು ಜೂನ್ 2024ರವರೆಗೆ ವಿಸ್ತರಿಸಲಾಗಿತ್ತು.
ನಡ್ಡಾ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡ ನಂತರ ಅವರ ಉತ್ತರಾಧಿಕಾರಿಯಾಗಲು ಸಂಭಾವ್ಯ ಅಭ್ಯರ್ಥಿಗಳಿಗಾಗಿ ಬಿಜೆಪಿಯು ಎದುರು ನೋಡುತ್ತಿದೆ.
ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಕಠಿಣ ಕೆಲಸವಾಗಿದೆ. ಬಿಜೆಪಿಯು ಸರಿಯಾದ ಜಾತಿ ಸಂಯೋಜನೆಯನ್ನು ಹಾಗೂ ಭಾಷಾ ವಿವಾದ ಮತ್ತು ಕ್ಷೇತ್ರ ಪುನರ್ವಿಂಗಡಣೆ ಕುರಿತು ಉತ್ತರ-ದಕ್ಷಿಣ ವಿಭಜನೆಯನ್ನು ನಿಭಾಯಿಸಬೇಕಿದೆ.
ಲೋಕಸಭಾ ಚುನಾವಣೆಗಳಲ್ಲಿ ಉತ್ತರ ಪ್ರದೇಶದಲ್ಲಿ ಹಿನ್ನಡೆಯಾಗಿದ್ದರಿಂದ ಪಕ್ಷಕ್ಕೆ ಸದನದಲ್ಲಿ ತನ್ನದೇ ಸ್ವಂತ ಬಹುಮತವನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅದು ಈಗಾಗಲೇ ಆ ರಾಜ್ಯದಲ್ಲಿ ತನ್ನ ನೆಲೆಯನ್ನು ಸುಭದ್ರಗೊಳಿಸುವ ಒತ್ತಡದಲ್ಲಿದೆ. ಇದು ನೂತನ ಅಧ್ಯಕ್ಷರು ಉತ್ತರ ಪ್ರದೇಶದಿಂದ ಆಯ್ಕೆಯಾಗಲಿದ್ದಾರೆಯೇ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.
ಅಭ್ಯರ್ಥಿಯು ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರೆಸ್ಸೆಸ್ ಸೇರಿದಂತೆ ಎಲ್ಲರೂ ಒಪ್ಪುವಂತಹ ವ್ಯಕ್ತಿಯಾಗಿರಬೇಕು ಮತ್ತು ಸಾಂಸ್ಥಿಕ ಮೌಲ್ಯಗಳನ್ನು ಅಳವಡಿಸಿಕೊಂಡಿರಬೇಕು ಎಂದೂ ಮೂಲಗಳು ತಿಳಿಸಿವೆ.