ಹರ್ಯಾಣ: ವಿವಿ ಕ್ಯಾಂಪಸ್‌ ನಲ್ಲಿ 400 ಅಫೀಮು ಗಿಡಗಳು ಪತ್ತೆ; ಮಾಲಿಯ ಬಂಧನ

Update: 2025-03-29 20:19 IST
ಹರ್ಯಾಣ: ವಿವಿ ಕ್ಯಾಂಪಸ್‌ ನಲ್ಲಿ 400 ಅಫೀಮು ಗಿಡಗಳು ಪತ್ತೆ; ಮಾಲಿಯ ಬಂಧನ

Photo : tribuneindia

  • whatsapp icon

ಚಂಡಿಗಡ: ಹರ್ಯಾಣದ ಸೋನೆಪತ್‌ ನ ಖಾಸಗಿ ವಿವಿಯ ಕ್ಯಾಂಪಸ್‌ ನಲ್ಲಿ ಕಾನೂನುಬಾಹಿರವಾಗಿ ಅಫೀಮು ಗಿಡಗಳನ್ನು ಬೆಳೆಸಿರುವುದನ್ನು ಪತ್ತೆ ಹಚ್ಚಿರುವ ಅಧಿಕಾರಿಗಳು ಮಾಲಿಯನ್ನು ಬಂಧಿಸಿದ್ದಾರೆ. ಒಂದು ದಿನದ ಹಿಂದಷ್ಟೇ ರೋಹ್ಟಕ್‌ ನಲ್ಲಿಯ ಖಾಸಗಿ ವಿವಿಯ ಕ್ಯಾಂಪಸ್‌ ನಿಂದ 140 ಅಫೀಮು ಗಿಡಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ದ್ರವ್ಯ ಸಸ್ಯಗಳನ್ನು ಬೆಳೆದಿರುವುದು ವ್ಯಾಪಕ ಕಳವಳ ವ್ಯಕ್ತವಾಗಿದೆ.

ಸೋನೆಪತ್‌ ನ ವರ್ಲ್ಡ್ ಯುನಿವರ್ಸಿಟಿ ಆಫ್ ಡಿಸೈನ್(ಡಬ್ಲ್ಯುಯುಡಿ)ನಲ್ಲಿ ಅಫೀಮು ಕೃಷಿಯ ಬಗ್ಗೆ ಸುಳಿವನ್ನು ಪಡೆದಿದ್ದ ಪೋಲಿಸರು, ಔಷಧಿ ನಿಯಂತ್ರಣ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ದಾಳಿಯನ್ನು ನಡೆಸಿದ್ದು,ಈ ವೇಳೆ ಸುಮಾರು 40 ಕೆ.ಜಿ.ಗಳಷ್ಟು ಅಫೀಮು ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗಿಡಗಳು ಮೂರರಿಂದ ನಾಲ್ಕು ಅಡಿ ಎತ್ತರ ಬೆಳೆದಿದ್ದವು.

ಬಂಧಿತ ಸಂತಲಾಲ್ ಮೂಲತಃ ಉತ್ತರ ಪ್ರದೇಶದ ಸುಲ್ತಾನ್‌ ಪುರ ನಿವಾಸಿಯಾಗಿದ್ದು, ಕಳೆದ ಒಂಭತ್ತು ವರ್ಷಗಳಿಂದಲೂ ವಿವಿಯಲ್ಲಿ ಮಾಲಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಮೇಲ್ನೋಟಕ್ಕೆ ಅಫೀಮು ಗಿಡಗಳನ್ನು ಎರಡು ತಿಂಗಳ ಹಿಂದೆ ನೆಟ್ಟಿದ್ದಂತೆ ಕಂಡು ಬಂದಿದೆ. ಸಂತಲಾಲ್‌ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಮೂರು ದಿನಗಳ ಪೋಲಿಸ್ ಕಸ್ಟಡಿಯನ್ನು ವಿಧಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರಬಹುದಾದ ಇತರರ ಬಗ್ಗೆ ಮತ್ತು ಈ ಗಿಡಗಳನ್ನು ಮಾದಕ ವಸ್ತುವಾಗಿ ಬಳಸಲಾಗುತ್ತಿತ್ತೇ ಎನ್ನುವುದನ್ನು ತಿಳಿದುಕೊಳ್ಳಲು ತನಿಖೆ ಪ್ರಗತಿಯಲ್ಲಿದೆ ಎಂದು ಡಿಸಿಪಿ ನರಿಂದರ್ ಸಿಂಗ್ ಸುದ್ದಿಸಂಸ್ಥೆಗೆ ತಿಳಿಸಿದರು.

ಇದಕ್ಕೂ ಮುನ್ನ ರೋಹ್ಟಕ್‌ ನ ದಾದಾ ಲಕ್ಷ್ಮಿಚಂದ್ ಸ್ಟೇಟ್ ಯುನಿವರ್ಸಿಟಿ ಆಫ್ ಪರ್ಫಾರ್ಮಿಂಗ್ ಆ್ಯಂಡ್ ವಿಷುವಲ್ ಆರ್ಟ್ಸ್‌ನ ಕ್ಯಾಂಪಸ್‌ ನಲ್ಲಿ 140 ಅಫೀಮು ಗಿಡಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಈ ಗಿಡಗಳನ್ನು ಬೆಳೆಸಿದ್ದು ಹೇಗೆ ಮತ್ತು ಅವುಗಳನ್ನು ಈ ಮೊದಲೇ ಏಕೆ ಪತ್ತೆ ಹಚ್ಚಿರಲಿಲ್ಲ ಎಂಬ ಬಗ್ಗೆ ತನಿಖೆಗಾಗಿ ವಿವಿ ಆಡಳಿತವು ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಮಾದಕದ್ರವ್ಯಗಳ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳು ಈಗ ಅಫೀಮು ಕೃಷಿಯ ಮೂಲವನ್ನು ಪತ್ತೆ ಹಚ್ಚಲು ಮತ್ತು ಪ್ರದೇಶದಲ್ಲಿಯ ಮಾದಕ ದ್ರವ್ಯ ವಿತರಣೆ ಜಾಲಗಳೊಂದಿಗೆ ಸಂಭಾವ್ಯ ಸಂಪರ್ಕಗಳನ್ನು ಗುರುತಿಸಲು ಗಮನವನ್ನು ಕೇಂದ್ರೀಕರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News