‘ಕರಾಳ ಕಾನೂನು’: ವಕ್ಫ್ ಮಸೂದೆ ವಿರುದ್ಧ ಕಾನೂನು ಸಮರಕ್ಕೆ ಎಐಎಂಪಿಎಲ್‌ಬಿ ಸಜ್ಜು

Photo credit: ANI
ಹೊಸದಿಲ್ಲಿ: ಭಾರತದಲ್ಲಿ ಮುಸ್ಲಿಮರನ್ನು ಪ್ರತಿನಿಧಿಸುವ ಪ್ರಮುಖ ಸಂಘಟನೆಯಾಗಿರುವ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ)ಯು ವಕ್ಫ್(ತಿದ್ದುಪಡಿ) ಮಸೂದೆಯನ್ನು ಸಮುದಾಯದ ಹಕ್ಕುಗಳಿಗೆ ಬೆದರಿಕೆಯೊಡ್ಡಿರುವ ‘ಕರಾಳ ಕಾನೂನು’ ಎಂದು ಬುಧವಾರ ಬಣ್ಣಿಸಿದ್ದು, ಅದನ್ನು ತಾನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಘೋಷಿಸಿದೆ.
ಬುಧವಾರ ಲೋಕಸಭೆಯಲ್ಲಿ ಚರ್ಚೆ ಮತ್ತು ಅಂಗೀಕಾರಕ್ಕಾಗಿ ಮಸೂದೆಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಇಲ್ಲಿ ಅಂಗೀಕಾರಗೊಂಡರೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಸೂದೆಯನ್ನು ಟೀಕಿಸಿದ ಎಐಎಂಪಿಎಲ್‌ಬಿ ಸದಸ್ಯ ಮುಹಮ್ಮದ್ ಅದೀಬ್ ಅವರು, ಇದು ಮುಸ್ಲಿಮ್ ಸಮುದಾಯದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
‘ನಮ್ಮ ಆಸ್ತಿಯನ್ನು ಕಸಿದುಕೊಳ್ಳಬಹುದು ಎಂದು ಯೋಚಿಸಿ ಅವರು ಈ ಕಸರತ್ತನ್ನು ಆರಂಭಿಸಿದ್ದಾರೆ. ಇದನ್ನು ಒಪ್ಪಿಕೊಳ್ಳಬಹುದೇ? ನಾವು ಸೋತಿದ್ದೇವೆ ಎಂದು ಭಾವಿಸಬೇಡಿ’ ಎಂದು ಹೇಳಿದ ಅದೀಬ್, ಮಸೂದೆಯ ವಿರುದ್ಧ ಹೋರಾಟ ಕೇವಲ ಆರಂಭ ಎಂದು ಒತ್ತಿ ಹೇಳಿದರು.
ಜಂಟಿ ಸಂಸದೀಯ ಸಮಿತಿಯ ಚರ್ಚೆಗಳಲ್ಲಿ ಮಸೂದೆಯನ್ನು ವಿರೋಧಿಸಲಾಗಿತ್ತು ಎಂದ ಅವರು, ‘ನಾವು ಈ ಹೋರಾಟದಲ್ಲಿ ಸೋತಿದ್ದೇವೆ ಎಂದು ಭಾವಿಸಬಾರದು,ನಾವು ಈಗಷ್ಟೇ ಆರಂಭಿಸಿದ್ದೇವೆ’ ಎಂದರು.
ಪ್ರಸ್ತಾವಿತ ಕಾನೂನು ಭಾರತದ ಸ್ವರೂಪಕ್ಕೆ ಅಪಾಯವನ್ನುಂಟು ಮಾಡುತ್ತದೆ, ಹೀಗಾಗಿ ಇದು ದೇಶವನ್ನು ಉಳಿಸಲು ಹೋರಾಟವಾಗಿದೆ ಎಂದು ಹೇಳಿದರು.
ಎಲ್ಲ ಪ್ರಜ್ಞಾವಂತ ನಾಗರಿಕರು ಮಸೂದೆಯನ್ನು ವಿರೋಧಿಸಬೇಕು ಎಂದು ಆಗ್ರಹಿಸಿದ ಅವರು, ಕಾನೂನುಬದ್ಧವಾಗಿ ಮತ್ತು ಸಾರ್ವಜನಿಕ ಪ್ರತಿಭಟನೆಗಳ ಮೂಲಕ ಪ್ರಸ್ತಾವಿತ ಶಾಸನವನ್ನು ವಿರೋಧಿಸುವ ಎಐಎಂಪಿಎಲ್‌ಬಿಯ ಬದ್ಧತೆಯನ್ನು ಪುನರುಚ್ಚರಿಸಿದರು. ‘ನಾವು ನ್ಯಾಯಾಲಯಕ್ಕೆ ಹೋಗುತ್ತೇವೆ. ಈ ಕಾನೂನನ್ನು ಹಿಂದೆಗೆದುಕೊಳ್ಳುವವರೆಗೆ ನಾವು ವಿಶ್ರಮಿಸುವುದಿಲ್ಲ’ ಎಂದು ಹೇಳಿದರು.
‘ನಾವು ದೇಶವನ್ನು ಉಳಿಸಲು ಬಯಸಿರುವುದರಿಂದ ಈ ಹೋರಾಟವನ್ನು ಆರಂಭಿಸಿದ್ದೇವೆ. ಈ ಕರಾಳ ಕಾನೂನಿಗೆ ಅಂತ್ಯ ಹಾಡುವುದು ನಮ್ಮ ಗುರಿಯಾಗಿದೆ’ ಎಂದು ಎಐಎಂಪಿಎಲ್‌ಬಿ ವಕ್ತಾರ ಮುಹಮ್ಮದ್ ಅಲಿ ಮೊಹ್ಸೀನ್ ಹೇಳಿದರು.
‘ರೈತರ ಪ್ರತಿಭಟನೆಯಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸುತ್ತೇವೆ. ಅಗತ್ಯವಾದರೆ ನಾವು ರಸ್ತೆಗಳನ್ನು ನಿರ್ಬಂಧಿಸುತ್ತೇವೆ ಮತ್ತು ಮಸೂದೆಯನ್ನು ವಿರೋಧಿಸಲು ಎಲ್ಲ ಶಾಂತಿಯುತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ’ಎಂದರು.
ಸುದ್ದಿಗೋಷ್ಠಿಯಲ್ಲಿ ಎಐಎಂಪಿಎಲ್‌ಬಿಯ ವಕ್ತಾರ ಎಸ್.ಕ್ಯೂ. ಆರ್ ಇಲ್ಯಾಸ್ ಮಾತನಾಡಿದರು.