ರೈಲ್ವೆ-ರಕ್ಷಣಾ ಭೂಮಿಗಳನ್ನು ಮಾರಾಟ ಮಾಡಲಾಯಿತು, ಇದೀಗ ವಕ್ಫ್ ಭೂಮಿಯನ್ನೂ ಮಾರಾಟ ಮಾಡಲಾಗುತ್ತದೆ: ಅಖಿಲೇಶ್ ಯಾದವ್ ವಾಗ್ದಾಳಿ
ಅಖಿಲೇಶ್ ಯಾದವ್ | PTI
ಹೊಸದಿಲ್ಲಿ: ಇಂದು ಲೋಕಸಭೆಯಲ್ಲಿ ಮಂಡನೆಯಾದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಬಲವಾಗಿ ವಿರೋಧಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮಸೂದೆಯ ನ್ಯಾಯಸಮ್ಮತತೆ ಕುರಿತು ಪ್ರಶ್ನೆ ಎತ್ತಿದರು. ಅಲ್ಲದೆ, ಬಿಜೆಪಿಯು ವಕ್ಫ್ ಆಸ್ತಿಯನ್ನು ಖಾಸಗೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದೂ ಆರೋಪಿಸಿದರು.
ಇಂದು ಲೋಕಸಭೆಯಲ್ಲಿ ಮಂಡನೆಯಾದ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧ ಪಕ್ಷಗಳು ಬಲವಾಗಿ ವಿರೋಧಿಸಿದವು. ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಖಿಲೇಶ್ ಯಾದವ್, “ನಮ್ಮ ಪಕ್ಷವು ಈ ಮಸೂದೆಯನ್ನು ವಿರೋಧಿಸುತ್ತದೆ. ಯಾವ ಜನರಿಗಾಗಿ ಈ ಮಸೂದೆಯನ್ನು ಜಾರಿಗೆ ತರಲಾಗುತ್ತದೆಯೊ, ಅಂಥ ಜನರ ಮಾತುಗಳಿಗೆ ಪ್ರಾಮುಖ್ಯತೆ ನೀಡದಿರುವುದಕ್ಕಿಂತ ಹೆಚ್ಚಿನ ಅನ್ಯಾಯ ಮತ್ತೇನಿದೆ?” ಎಂದು ಪ್ರಶ್ನಿಸಿದರು.
ಬಿಜೆಪಿಯು ತನ್ನ ವಿಶಾಲ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ಈ ಮಸೂದೆಯನ್ನು ಬಳಸುತ್ತಿದ್ದು, ಅದು ಮುಂದೆ ವಕ್ಫ್ ಭೂಮಿಯನ್ನೂ ಮಾರಾಟ ಮಾಡಲಿದೆ ಎಂದೂ ಅವರು ಆರೋಪಿಸಿದರು.
“ಬಿಜೆಪಿಯು ಭೂಮಿಯನ್ನು ಅತಿ ಹೆಚ್ಚು ಇಷ್ಟಪಡುವ ಪಕ್ಷವಾಗಿದೆ. ಅವರು ರೈಲ್ವೆ ಹಾಗೂ ರಕ್ಷಣಾ ಇಲಾಖೆಗಳ ಭೂಮಿಯನ್ನು ಮಾರಾಟ ಮಾಡಿದರು. ಈಗವರು ವಕ್ಫ್ ಭೂಮಿಯನ್ನೂ ಮಾರಾಟ ಮಾಡಲಿದ್ದಾರೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇದೆಲ್ಲ ಅವರ ಉಪಾಯವಾಗಿದೆ” ಎಂದು ಅವರು ವಾಗ್ದಾಳಿ ನಡೆಸಿದರು.
ಈ ವೇಳೆ ಸರಕಾರದ ಭೂಮಿ ನಿರ್ವಹಣೆಯ ದಾಖಲೆಯತ್ತಲೂ ಅಖಿಲೇಶ್ ಯಾದವ್ ಬೊಟ್ಟು ಮಾಡಿದರು. “ನಮ್ಮ ಮುಖ್ಯಮಂತ್ರಿಗಳು ನನಗೆ ರಾಜಕೀಯ ಅರೆಕಾಲಿಕ ಉದ್ಯೋಗ ಎಂದು ಹೇಳುತ್ತಾರೆ. ಹಾಗಾದರೆ, ಇಂತಹ ಅರೆಕಾಲಿಕ ಉದ್ಯೋಗ ಹೊಂದಿರುವವರನ್ನು ದಿಲ್ಲಿಯ ನಾಯಕರೇಕೆ ತೆಗೆದು ಹಾಕುತ್ತಿಲ್ಲ?” ಎಂದೂ ಅವರು ಪ್ರಶ್ನಿಸಿದರು.
ಆದರೆ, ಮಸೂದೆಯನ್ನು ಸಮರ್ಥಿಸಿಕೊಂಡ ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್, ವಕ್ಫ್ ತಿದ್ದುಪಡಿ ಮಸೂದೆಯು ಮುಸ್ಲಿಂ ಸಮುದಾಯಕ್ಕಾಗಿನ ಸಕಾರಾತ್ಮಕ ಹೆಜ್ಜೆಯಾಗಿದೆ. ಇದರಿಂದ ಬಡ ಮುಸ್ಲಿಮರಿಗೆ ಪ್ರಯೋಜನವಾಗಲಿದ್ದು, ವಕ್ಫ್ ಆಸ್ತಿಗಳ ನಿರ್ವಹಣೆಯನ್ನು ಸುಗಮಗೊಳಿಸಲು ನೆರವಾಗಲಿದೆ ಎಂದು ಹೇಳಿದರು.