ಕಲ್ಕತ್ತಾ ಹೈಕೋರ್ಟ್ ನಲ್ಲಿ ನ್ಯಾ.ಶರ್ಮಾರ ಪ್ರಮಾಣ ವಚನ ಸ್ವೀಕಾರವನ್ನು ಬಹಿಷ್ಕರಿಸಲು ವಕೀಲರ ಸಂಘಗಳ ನಿರ್ಧಾರ

Update: 2025-04-02 18:25 IST
Calcutta High Court

ಕಲಕತ್ತಾ ಹೈಕೋರ್ಟ್ | PC : PTI 

  • whatsapp icon

ಕೋಲ್ಕತಾ: ನ್ಯಾ.ದಿನೇಶ್ ಕುಮಾರ್ ಶರ್ಮಾರನ್ನು ದಿಲ್ಲಿ ಉಚ್ಚ ನ್ಯಾಯಾಲಯದಿಂದ ಕಲಕತ್ತಾ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಯ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿರುವ ವಕೀಲರ ಸಂಘಗಳು,‌ ನ್ಯಾ.ಶರ್ಮಾರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ತಾವು ಬಹಿಷ್ಕರಿಸುವುದಾಗಿ ಮತ್ತು ಅವರ ನ್ಯಾಯಾಲಯಕ್ಕೆ ಹಾಜರಾಗದಿರಬಹುದು ಎಂದು ಮುಖ್ಯ ನ್ಯಾಯಾಧೀಶರಿಗೆ ಜಂಟಿಯಾಗಿ ತಿಳಿಸಿವೆ.

ನ್ಯಾ.ಶರ್ಮಾರನ್ನು ಮಂಗಳವಾರ ದಿಲ್ಲಿಯಿಂದ ಕಲಕತ್ತಾ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ.

ನ್ಯಾ.ಶರ್ಮಾರನ್ನು ಯಾವುದೇ ನ್ಯಾಯಾಂಗ ಕಾರ್ಯಕ್ಕೆ ನಿಯೋಜಿಸದಂತೆಯೂ ದಿ ಬಾರ್ ಅಸೋಸಿಯೇಷನ್,ಬಾರ್ ಲೈಬ್ರರಿ ಕ್ಲಬ್ ಮತ್ತು ಇನ್ಕಾರ್ಪೊರೇಟೆಡ್ ಲಾ ಸೊಸೈಟಿ ಕಲಕತ್ತಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಸಲ್ಲಿಸಿರುವ ಜಂಟಿ ಅಹವಾಲಿನಲ್ಲಿ ಆಗ್ರಹಿಸಿವೆ. ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರವು ನ್ಯಾ.ಶರ್ಮಾರನ್ನು ಕಲಕತ್ತಾ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿ ಅಧಿಸೂಚನೆಯನ್ನು ಹೊರಡಿಸಿದೆ.

ಯಾವುದೇ ಪ್ರಕರಣವನ್ನು ನ್ಯಾ.ಶರ್ಮಾರಿಗೆ ವಹಿಸಿದರೆ ನಮ್ಮ ಸದಸ್ಯರು ಅವರೆದುರು ಹಾಜರಾಗದಿರುವ ಸಾಧ್ಯತೆಯಿದೆ ಎಂದು ಅಹವಾಲಿನಲ್ಲಿ ತಿಳಿಸಲಾಗಿದೆ.

ನ್ಯಾ.ಶರ್ಮಾರನ್ನು ಕೋಲ್ಕತಾಕ್ಕೆ ವರ್ಗಾಯಿಸಲು ಶಿಫಾರಸನ್ನು ವಿರೋಧಿಸಿ ವಕೀಲರು ಮಂಗಳವಾರ ಕಲಕತ್ತಾ ಉಚ್ಚ ನ್ಯಾಯಾಲಯದ ಕಲಾಪಗಳಿಂದ ದೂರವುಳಿದಿದ್ದರು.

ನ್ಯಾ.ಶರ್ಮಾರ ವರ್ಗಾವಣೆಗೆ ಕೊಲಿಜಿಯಂ ಶಿಫಾರಸನ್ನು ಆಕ್ಷೇಪಿಸಿ ಈ ಮೂರು ವಕೀಲರ ಸಂಘಗಳು ಈ ಹಿಂದೆ ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ)ರಿಗೆ ಜಂಟಿ ಅಹವಾಲನ್ನು ಕಳುಹಿಸಿದ್ದವು.

‘ನ್ಯಾಯದ ಆಡಳಿತದಲ್ಲಿ ಸಾಮಾನ್ಯವಾಗಿರುವ ನಿಯಮಿತ ವರ್ಗಾವಣೆಗಳ ಬಗ್ಗೆ ನಮಗೆ ಅರಿವಿದೆ, ಆದರೆ ಈ ವರ್ಗಾವಣೆಯು ಆ ವರ್ಗಕ್ಕೆ ಸೇರುವುದಿಲ್ಲ ಎಂದು ನಂಬಲು ನಮಗೆ ಕಾರಣಗಳಿವೆ’ ಎಂದು ಸಿಜೆಐಗೆ ಸಲ್ಲಿಸಿದ ಅಹವಾಲಿನಲ್ಲಿ ತಿಳಿಸಿದ್ದ ವಕೀಲರ ಸಂಘಗಳು, ಪ್ರಶ್ನಾರ್ಹ ವ್ಯಕ್ತಿತ್ವದ ಅಥವಾ ಅಲ್ಪಾವಧಿಗೆ ವರ್ಗಾವಣೆಗೊಂಡ ನ್ಯಾಯಾಧಿಶರನ್ನು ಹೊಂದುವುದು ದೇಶದ ಅತ್ಯಂತ ಹಳೆಯ ಸಾಂವಿಧಾನಿಕ ದೇಗುಲವಾಗಿರುವ ಕಲಕತ್ತಾ ಉಚ್ಚ ನ್ಯಾಯಾಲಯಕ್ಕೆ ಹೇಳಿಸಿದ್ದಲ್ಲ ಎಂದು ಒತ್ತಿ ಹೇಳಿದ್ದವು.

ನ್ಯಾ.ಶರ್ಮಾರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹಾಜರಾಗದಂತೆ ಅವು ಹೆಚ್ಚುವರಿ ಸಾಲಿಸಿಟರ್ ಜನರಲ್ ಮತ್ತು ಅಡ್ವೊಕೇಟ್ ಜನರಲ್ ಅವರನ್ನೂ ಆಗ್ರಹಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News