ವಕ್ಫ್ ಮಸೂದೆಗೆ ಪಕ್ಷದ ಬೆಂಬಲಕ್ಕೆ ವಿರೋಧ : ಆರ್‌ಎಲ್‌ಡಿ ನಾಯಕ ರಾಜೀನಾಮೆ

Photo | NDTV
ಮೀರತ್: ಆರ್‌ಎಲ್‌ಡಿ ಪಕ್ಷ ಸಂಸತ್ತಿನಲ್ಲಿ ವಕ್ಫ್ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಆರ್‌ಎಲ್‌ಡಿ ಉತ್ತರ ಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶಹಝೇಬ್ ರಿಝ್ವಿ ರಾಜೀನಾಮೆ ನೀಡಿದರು.
ರಾಷ್ಟ್ರೀಯ ಲೋಕದಳ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಶಹಝೇಬ್ ರಿಝ್ವಿ, ವಕ್ಫ್ ಮಸೂದೆಯನ್ನು ಬೆಂಬಲಿಸುವ ಆರ್‌ಎಲ್‌ಡಿ ರಾಷ್ಟ್ರೀಯ ಅಧ್ಯಕ್ಷ ಜಯಂತ್ ಚೌಧರಿ ಅವರ ನಿರ್ಧಾರದಿಂದ ನಾನು ಅಸಮಾಧಾನಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ನಾಯಕರು ಪಕ್ಷವನ್ನು ತೊರೆಯಲಿದ್ದಾರೆ. ನನ್ನ ಜೊತೆಯಲ್ಲೇ 2,000ಕ್ಕೂ ಅಧಿಕ ಆರ್‌ಎಲ್‌ಡಿ ಕಾರ್ಯಕರ್ತರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿದರು.
ಚೌಧರಿ ಅವರು ಮುಸ್ಲಿಂ ಮತದಾರರ ಭಾವನೆಗಳನ್ನು ಕಡೆಗಣಿಸಿದ್ದಾರೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಆರ್‌ಎಲ್‌ಡಿ 10 ಶಾಸಕರನ್ನು ಹೊಂದಿದೆ. ಮುಸ್ಲಿಮರು ಇದಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮಸೂದೆಯನ್ನು ಬೆಂಬಲಿಸುವ ಪಕ್ಷದ ಅಧ್ಯಕ್ಷರ ನಿರ್ಧಾರವು ನಿರಾಶೆಯನ್ನುಂಟುಮಾಡಿದೆ ಎಂದು ರಿಝ್ವಿ ಹೇಳಿದರು.
ಚೌಧರಿ ಅವರು ವಕ್ಫ್ ಮಸೂದೆಯನ್ನು ಬೆಂಬಲಿಸುವ ಮೂಲಕ ಮುಸ್ಲಿಮರಿಗೆ ದ್ರೋಹ ಮಾಡಿದರು. ಮುಸ್ಲಿಮರು ಜಯಂತ್ ಚೌಧರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ನೀಡಿದರು. ಆದರೆ, ಅವರು ವಕ್ಫ್ ಮಸೂದೆಯನ್ನು ಬೆಂಬಲಿಸಿದರು. ಇದು ಮುಸ್ಲಿಮರ ಭಾವನೆಗಳು ಮತ್ತು ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.