ಕುನಾಲ್ ಕಾಮ್ರಾ ವಿರುದ್ಧ ಮುಂಬೈಯಲ್ಲಿ ಮತ್ತೆ 3 ಪ್ರಕರಣ ದಾಖಲು

Photo Credit: X/@kunalkamra
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಸ್ಟಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ವಿರುದ್ಧ ಕಾರ್ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಿಸಲಾಗಿವೆ.
ಒಂದು ದೂರನ್ನು ಜಲ್ಗಾಂವ್ ನಗರದ ಮೇಯರ್ ದಾಖಲಿಸಿದ್ದಾರೆ. ಇನ್ನೆರೆಡು ದೂರುಗಳನ್ನು ನಾಸಿಕ್ ನ ಓರ್ವ ಹೊಟೇಲ್ ಉದ್ಯಮಿ ಹಾಗೂ ಉದ್ಯಮಿ ದಾಖಲಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಖಾರ್ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಕಾಮ್ರಾ ಅವರಿಗೆ ಎರಡು ಬಾರಿ ಸೂಚಿಸಿದ್ದರು. ಆದರೆ, ಅವರು ಇದುವರೆಗೆ ವಿಚಾರಣೆಗೆ ಹಾಜರಾಗಿಲ್ಲ.
ಇದಕ್ಕಿಂತ ಮುನ್ನ ದಾಖಲಾದ ಹಲವು ಎಫ್ ಐ ಆರ್ ಗಳಿಗೆ ಸಂಬಂಧಿಸಿ ಮದ್ರಾಸ್ ಉಚ್ಚ ನ್ಯಾಯಾಲಯ ಶುಕ್ರವಾರ ಕಾಮ್ರಾ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಸುಂದರ್ ಮೋಹನ್ ಅವರು ಷರತ್ತುಗಳೊಂದಿಗೆ ಎಪ್ರಿಲ್ 7ರ ವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದ್ದಾರೆ.
ತನ್ನ ಇತ್ತೀಚೆಗಿನ ವಿಡಂಬನಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಹಲವು ಬೆದರಿಕೆಗಳನ್ನು ಸ್ವೀಕರಿಸಿದ್ದೇನೆ ಎಂದು ಪ್ರತಿಪಾದಿಸಿ ಕಾಮ್ರಾ ಅವರು ವರ್ಗಾವಣೆ ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.