ಭಾರತದ ಅಗ್ರ 30 ಖಾಸಗಿ ವಿವಿಗಳಲ್ಲಿ ಶೇ.5ರಷ್ಟು ಎಸ್‌ಸಿ,ಶೇ.1ಕ್ಕೂ ಕಡಿಮೆ ಎಸ್‌ಟಿ ವಿದ್ಯಾರ್ಥಿಗಳು; ವರದಿ

ಸಾಂದರ್ಭಿಕ ಚಿತ್ರ (credit: Meta AI)
ಹೊಸದಿಲ್ಲಿ: ಶಿಕ್ಷಣ,ಮಹಿಳೆಯರು, ಮಕ್ಕಳು,ಯುವಜನ ಮತ್ತು ಕ್ರೀಡೆಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಪ್ರಕಾರ ಭಾರತದ ಅಗ್ರ 30 ಖಾಸಗಿ ವಿವಿಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಪೈಕಿ ಕೇವಲ ಶೇ.5ರಷ್ಟು ಪರಿಶಿಷ್ಟ ಜಾತಿ(ಎಸ್‌ಸಿ)ಗಳಿಗೆ ಸೇರಿದವರಾಗಿದ್ದಾರೆ. ಮಾ.26ರಂದು ಲೋಕಸಭೆಯಲ್ಲಿ ಮಂಡಿಸಲಾದ ಸಮಿತಿಯ ವರದಿಯು ಪಿಲಾನಿಯ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸಸ್‌ನಲ್ಲಿ ಎಸ್‌ಸಿ,ಪರಿಶಿಷ್ಟ ಪಂಗಡ(ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗ(ಒಬಿಸಿ)ಕ್ಕೆ ಸೇರಿದ ಒಬ್ಬನೇ ಒಬ್ಬ ವಿದ್ಯಾರ್ಥಿಯಿರಲಿಲ್ಲ ಎಂದು ಬೆಟ್ಟು ಮಾಡಿದೆ ಎಂದು thenewsminute.com ವರದಿ ಮಾಡಿದೆ.
ಈ ದತ್ತಾಂಶಗಳು ಇನ್ನಷ್ಟೇ ಪ್ರಕಟಗೊಳ್ಳಬೇಕಿರುವ 2022-23ನೇ ಸಾಲಿನ ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ(ಎಐಎಸ್‌ಎಚ್‌ಇ)ಯಿಂದ ಲಭ್ಯವಾಗಿವೆ. ಸಮೀಕ್ಷಾ ವರದಿಯು 2025-26ನೇ ಸಾಲಿಗೆ ಉನ್ನತ ಶಿಕ್ಷಣ ಇಲಾಖೆಯ ಅನುದಾನ ಬೇಡಿಕೆಗಳ ಕುರಿತು ಸಂಸದೀಯ ಸಮಿತಿಯ 364ನೇ ವರದಿಯ ಭಾಗವಾಗಿದೆ.
ಇದು ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್‌ವರ್ಕ್(ಎನ್‌ಐಆರ್‌ಎಫ್)ನ ಅಗ್ರ 100 ವಿವಿ ಶ್ರೇಯಾಂಕಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಖಾಸಗಿ ವಿವಿಗಳಲ್ಲಿ ಸಾಮಾಜಿಕ ವರ್ಗವಾರು ದಾಖಲಾತಿಗಳು ಮತ್ತು ಅಧ್ಯಾಪಕರ ಅಂಕಿಅಂಶಗಳನ್ನು ತೋರಿಸಿದೆ.
ಈ ವಿವಿಗಳಲ್ಲಿ ಶೇ.1ಕ್ಕೂ ಕಡಿಮೆ ವಿದ್ಯಾರ್ಥಿಗಳು ಎಸ್‌ಟಿಗಳಾಗಿದ್ದರೆ ಶೇ.24ರಷ್ಟು ವಿದ್ಯಾರ್ಥಿಗಳು ಒಬಿಸಿಗಳಾಗಿದ್ದಾರೆ.
ಒಟ್ಟಾರೆಯಾಗಿ 30 ಖಾಸಗಿ ವಿವಿಗಳಲ್ಲಿಯ ಬೋಧಕರಲ್ಲಿ ಕೇವಲ ಶೇ.4ರಷ್ಟು ಪರಿಶಿಷ್ಟ ಜಾತಿಗಳಿಗೆ ಸೇರಿದವರಾಗಿದ್ದಾರೆ.
ಅಣ್ಣಾ ವಿವಿಯು ಕೇವಲ ಓರ್ವ ಎಸ್‌ಸಿ ಬೋಧಕರನ್ನು ಹೊಂದಿದೆ ಎಂದು ತೋರಿಸಿರುವಂತಹ ಅಸಮಂಜಸತೆಗಳನ್ನು ಪರಿಗಣಿಸಿದರೆ ಎಐಎಸ್‌ಎಚ್‌ಇ ವರದಿಯು ಈಗಲೂ ಸಂಪೂರ್ಣವಾಗಿ ವಿಶ್ವಾಸಾರ್ಹವಲ್ಲ ಎಂದು ಎತ್ತಿ ತೋರಿಸಿರುವ ಸಮಿತಿಯು,ಎಐಎಸ್‌ಎಚ್‌ಇ ಉತ್ತಮ ಗುಣಮಟ್ಟಕ್ಕಾಗಿ ಸಾಂಸ್ಥಿಕ ಮಟ್ಟದ ಬದಲು ವೈಯಕ್ತಿಕ ಮಟ್ಟದಲ್ಲಿ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಶಿಫಾರಸು ಮಾಡಿದೆ.
ವರದಿಯು 34 ವಿವಿಗಳ ದತ್ತಾಂಶಗಳನ್ನು ಉಲ್ಲೇಖಿಸಿದ್ದು,ಈ ಪೈಕಿ ಜಾದವಪುರ ವಿವಿ,ಅಣ್ಣಾ ವಿವಿ,ಪಂಜಾಬ್ ವಿವಿ ಮತ್ತು ಸಿಲ್ಚಾರ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಸರಕಾರಿ ವಿವಿಗಳಾಗಿವೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್(ಮಾಹೆ)ನಲ್ಲಿ ಶೇ.0.46ರಷ್ಟು ಎಸ್‌ಸಿ,ಶೇ.0.36ರಷ್ಟು ಎಸ್‌ಟಿ ಮತ್ತು ಶೇ.18ರಷ್ಟು ಒಬಿಸಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಶಾಸ್ತ್ರ ವಿವಿ,ಅಮೃತಾ ವಿಶ್ವ ವಿದ್ಯಾಪೀಠಂ,ವಿಐಟಿ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳೂ ಕಡಿಮೆ ಸಂಖ್ಯೆಯಲ್ಲಿ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳನ್ನು ಹೊಂದಿವೆ.
ಈ ಅಗ್ರ 30 ಖಾಸಗಿ ವಿವಿಗಳಲ್ಲಿ ಕೇವಲ ಶೇ.0.46ರಷ್ಟು ಬೋಧಕರು ಎಸ್‌ಟಿಗಳಾಗಿದ್ದರೆ,ಶೇ.30ರಷ್ಟು ಬೋಧಕರು ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.